ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಗ್ಗೆ ಸರ್ಕಾರ ತಾಳಿರುವ ನಿರ್ಲಕ್ಷ್ಯ ಧೋರಣೆಯ ವಿರುದ್ಧ ವಿಧಾನಸಭೆಯಲ್ಲಿ ಗುರುವಾರ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ತೀವ್ರ ವಾಗ್ದಾಳಿ ನಡೆಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಮಂಡಿಸಿದ ಬಜೆಟ್‌ನಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿದ್ದಾರೆ. ಬಜೆಟ್‌ನಲ್ಲಿ ನಗರಾಭಿವೃದ್ಧಿ ಇಲಾಖೆಯ ಮೂಲಕ ಪ್ರಕಟಿಸಿದ ಅನುದಾನದಲ್ಲಿ ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಬಿಡಿಗಾಸೂ ನೀಡಿಲ್ಲ. ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಬೇಡಿಕೆಯ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಆರೋಪಿಸಿದರು.ಹುಬ್ಬಳ್ಳಿಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ ಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಗುರುಕುಲಕ್ಕೆ ಬರೀ ₹24 ಲಕ್ಷ ಅನುದಾನ ನೀಡಲಾಗಿದೆ. ಈ ಅನುದಾನದಿಂದ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗದು. ವೇತನವಿಲ್ಲದ ಕಾರಣ ಅನೇಕ ಸಂಗೀತ ಶಿಕ್ಷಕರು ಕೆಲಸ ಬಿಟ್ಟಿದ್ದಾರೆ. ದೇಶ ಕಂಡ ಹೆಸರಾಂತ ಹಿಂದುಸ್ತಾನಿ ಗಾಯಕಿ, ಹಿಂದುಳಿದ ವರ್ಗದ ಡಾ. ಗಂಗೂಬಾಯಿ ಹಾನಗಲ್ಲ ಅವರ ಬಗ್ಗೆ ಗೊತ್ತಿದ್ದು ಈ ರೀತಿ ಮಾಡಿದ್ದು ಏಕೆ? ಎಂದರು.
ಜತೆಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅಗತ್ಯವಿದ್ದ ₹28 ಕೋಟಿಗಳ ಪೈಕಿ ಬರೀ ₹10.94 ಕೋಟಿ ಬಿಡುಗಡೆ ಮಾಡಿದ್ದು ಸರಿಯಲ್ಲ ಎಂದು ಛೇಡಿಸಿದರು.ಮುಂದಿನ ಆರ್ಥಿಕ ವರ್ಷದಲ್ಲಿ ₹38,525 ಕೋಟಿ ಅಬಕಾರಿ ತೆರಿಗೆ ನಿರೀಕ್ಷಿಸಲಾಗುತ್ತಿದೆ ಎಂದು ಬಜೆಟ್‌ದಲ್ಲಿ ತಿಳಿಸಲಾಗಿದೆ. ಸರ್ಕಾರ ರಾಜ್ಯದಲ್ಲಿ ಅಬಕಾರಿ ತೆರಿಗೆ ಸಂಗ್ರಹಣೆಯಲ್ಲಿ 18 ಸ್ಲ್ಯಾಬ್ ಮಾಡಿದೆ. ಈ ಸ್ಲ್ಯಾಬ್‌ಗಳಲ್ಲಿ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯವನ್ನು ಬಡ ಜನರು ಸೇವಿಸುವುದರಿಂದ ಶೇ. 85 ಅಬಕಾರಿ ತೆರಿಗೆ ಬಡವರಿಂದ ಅಂದರೆ ಒಂದು ಕುಟುಂಬದಿಂದ ₹32 ಸಾವಿರ ಆದಾಯ ಸರ್ಕಾರಕ್ಕೆ ಬರುತ್ತಿದೆ. ಪ್ರತಿವರ್ಷ ₹50 ಸಾವಿರಗಳನ್ನು ಪ್ರತಿ ಕುಟುಂಬ ಸರ್ಕಾರಕ್ಕೆ ಸಂದಾಯ ಮಾಡುತ್ತಿದೆ. ಸರ್ಕಾರವೇ ತಿಳಿಸಿದಂತೆ ರಾಜ್ಯದಲ್ಲಿ 1.20 ಕೋಟಿ ಬಿಪಿಎಲ್ ಕಾರ್ಡು ಇರುವ ಕುಟುಂಬಗಳಿವೆ. ಈ ಕುಟುಂಬಗಳಿಗೆ ಸರ್ಕಾರವು ಗೃಹಲಕ್ಷ್ಮಿ, ಅನ್ನಭಾಗ್ಯ ಇನ್ನಿತರ ಯೋಜನೆಗಳು ಸೇರಿ ಬರೀ ₹27ರಿಂದ 28 ಸಾವಿರ ರೂ.ಗಳನ್ನು ಒಂದು ವರ್ಷಕ್ಕೆ ನೀಡುತ್ತಿದೆ. ಆದರೆ ಸರ್ಕಾರವು ಈ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 15ನೇ ಬಜೆಟ್ ಕೇವಲ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸೀಮಿತವಾಗಿದೆ. ಸರ್ಕಾರ ಮಾತ್ರ ಸಾಲ ಮಾಡಿ ತುಪ್ಪ ತಿನ್ನಬೇಕು ಎಂದು ತೀರ್ಮಾನಿಸಿದಂತೆ ಆಗಿದೆ ಎಂದು ತಮ್ಮ 90ಕ್ಕೂ ಹೆಚ್ಚು ನಿಮಿಷಗಳ ಮಾತುಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು.