ತಿಂಗಳಾದರೂ ಮಗು ಆರ್ಯನ್‌ ಪತ್ತೆಯಾಗಿಲ್ಲ

KannadaprabhaNewsNetwork | Published : Dec 17, 2024 12:45 AM

ಸಾರಾಂಶ

ಹರಪನಹಳ್ಳಿಯಲ್ಲಿ ನ.16ರಂದು ರಾತ್ರಿವೇಳೆ ಟೆಂಟ್‌ನಲ್ಲಿ ತಾಯಿ ಜೊತೆಗೆ ಮಲಗಿದ್ದ ಮಗುವನ್ನು ಯಾರೋ ಅಪಹರಣ ಮಾಡಿದ್ದಾರೆ. ಆದರೆ, ಇದುವರೆಗೂ ಮಗು ಪತ್ತೆಯಾಗಿಲ್ಲ. ಪೊಲೀಸರು ಶೀಘ್ರ ಮಗುವನ್ನು ಪತ್ತೆಹಚ್ಚಿ ಪಾಲಕರ ವಶಕ್ಕೆ ಒಪ್ಪಿಸುವಂತೆ ರಾಜ್ಯ ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ, ವಕೀಲ ಬಾಬು ಪಂಡಿತ್ ದಾವಣಗೆರೆಯಲ್ಲಿ ಮನವಿ ಮಾಡಿದ್ದಾರೆ.

- ನ.16ರಂದು ಘಟನೆ ನಡೆದರೂ ಮಗು ಸುಳಿವಿಲ್ಲ: ಜಿಲ್ಲಾ ಅಲೆಮಾರಿ ಸಂಘ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಪನಹಳ್ಳಿಯಲ್ಲಿ ನ.16ರಂದು ರಾತ್ರಿವೇಳೆ ಟೆಂಟ್‌ನಲ್ಲಿ ತಾಯಿ ಜೊತೆಗೆ ಮಲಗಿದ್ದ ಮಗುವನ್ನು ಯಾರೋ ಅಪಹರಣ ಮಾಡಿದ್ದಾರೆ. ಆದರೆ, ಇದುವರೆಗೂ ಮಗು ಪತ್ತೆಯಾಗಿಲ್ಲ. ಪೊಲೀಸರು ಶೀಘ್ರ ಮಗುವನ್ನು ಪತ್ತೆಹಚ್ಚಿ ಪಾಲಕರ ವಶಕ್ಕೆ ಒಪ್ಪಿಸುವಂತೆ ರಾಜ್ಯ ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ, ವಕೀಲ ಬಾಬು ಪಂಡಿತ್ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ತಾಲೂಕಿನ ವಾಸಿಗಳು, ಮೂಲತಃ ಅಲೆಮಾರಿಗಳಾದ ಯುವರಾಜ ಸಕಾರಾಂ ಪವಾರ್‌ ಪತ್ನಿ ಸಾರಿಕಾ ದಂಪತಿಯ ಮಗು ನಾಪತ್ತೆಯಾಗಿದೆ. 1 ವರ್ಷದ ಮಗು ಆರ್ಯನ್‌ ಹೊಂದಿರುವ ದಂಪತಿಯು ಊರಿನಿಂದೂರಿಗೆ ಹೋಗಿ ಗಂಧದ ಎಣ್ಣೆ ವ್ಯಾಪಾರ ಮಾಡುತ್ತಿದ್ದಾರೆ. ಹರಪನಹಳ್ಳಿ ಪಟ್ಟಣದ ಯಮಹಾ ಶೋ ರೂಂ ಬಳಿ ಟೆಂಟ್ ಹಾಕಿಕೊಂಡಿದ್ದಾರೆ ಎಂದರು.

ಯುವರಾಜ ಸಕಾರಾಂ ಪವಾರ್ ಕುಟುಂಬ ಟೆಂಟ್‌ನಲ್ಲಿ ತಾತ್ಕಾಲಿಕವಾಗಿ ತಂಗಿತ್ತು. ನ.16ರಂದು ರಾತ್ರಿ 10ರ ವೇಳೆ ತಾಯಿ ಜೊತೆಗೆ ಮಗುವೂ ಮಲಗಿತ್ತು. ತಡರಾತ್ರಿ 12ರಿಂದ 2 ಗಂಟೆ ಅವಧಿಯಲ್ಲಿ ಯುವರಾಜನ ಗಂಡು ಮಗು ಆರ್ಯನ್‌ ಅಪಹರಣವಾಗಿದೆ. ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಆದರೆ, ಈವರೆಗೆ ಮಗು ‍‍ಆರ್ಯನ್ ಪತ್ತೆಯಾಗಿಲ್ಲ. ವಿಜಯನಗರ ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿ, ಆರ್ಯನ್‌ನನ್ನು ಪಾಲಕರ ಮಡಿಲಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಆರ್ಯನ್‌ ತಂದೆ ಯುವರಾಜ ಸಕಾರಾಂ ಪವಾರ್, ತಾಯಿ ಸಾರಿಕಾ ಪವಾರ್, ಸಂಬಂಧಿ ಭೋಪಾಲ್ ಬಾಬು ಪವಾರ್ ಇದ್ದರು.

- - - -16ಕೆಡಿವಿಜಿ3: ದಾವಣಗೆರೆಯಲ್ಲಿ ರಾಜ್ಯ ಅಲೆಮಾರಿ ಸಂಘ ಜಿಲ್ಲಾಧ್ಯಕ್ಷ ಬಾಬು ಪಂಡಿತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

-16ಕೆಡಿವಿಜಿ4: ಆರ್ಯನ್‌.

Share this article