ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೧೨೦ ದಿನಗಳ ಹಿಂದೆ ಆಚಾರ್ಯ ಶ್ರೀ ೧೦೮ ಕುಲರತ್ನಭೂಷಣ ಮಹಾರಾಜ್ ರಿಂದ ಸಲ್ಲೇಖನ ವ್ರತ ಸ್ವೀಕರಿಸಿದ್ದ ಆರ್ಯಿಕಾ ಮಾತಾಜಿಯವರು ಅ.೧೮ರಂದು ಬೆಳಗ್ಗೆ ಅವರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಸ್ವಯಂ ಪ್ರೇರಿತವಾಗಿ ಆಚಾರ್ಯ ಶ್ರೀ ಕುಲರತ್ನಭೂಷಣ ಮಹಾರಾಜರಿಂದ ಅ.೧೯ರಂದೇ ಯಮಸಲ್ಲೇಖನ ವೃತ ಸ್ವಿಕರಿಸಿದ್ದರು. ಜೀವಿತಾವಧಿಯ ಕೊನೆ ಕ್ಷಣಗಳತ್ತ ಅವರ ಪಯಣ ಸಾಗಿತ್ತು. ಪ್ರತ್ಯಕ್ಷವಾಗಿ ಆತ್ಮ ದೇಹವನ್ನು ಬಿಟ್ಟು ಹೋಗುವಾಗ ಈ ಕಾಯ ಹೇಗಿರುತ್ತದೆ ಎಂಬುದನ್ನು ನೋಡಲು ಸಾವಿರಾರು ಜೈನ ಧರ್ಮಿಯರು ಹಾಗು ಅನ್ಯಧರ್ಮಿಯರೂ ಸಾಗರೋಪಾದಿಯಲ್ಲಿ ನೆರೆದಿದ್ದರು.
ಸಾವಿರಾರು ಜನರ ಎದುರೇ ದರ್ಶನಭೂಷಣಮತಿ ಮಾತಾಜಿ ಅ.೨೦ ಸೂರ್ಯಾಸ್ತ ಸಮಯ ಮುಗಿಯುತ್ತಿದ್ದಂತೆ ಸಂಜೆ ೬.೪೮ಕ್ಕೆ ಉಸಿರಾಟ ನಿಂತು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಆ ಕ್ಷಣ ಸಾವಿರಾರು ಭಕ್ತರ ಕಣ್ಣಂಚಿನ ಕಂಬನಿ ತರಿಸಿತು. ಜಿನೈಕ್ಯ ಕಾಲದಲ್ಲಿ ಅವರಿಗೆ ೧೦೩ ವರ್ಷವಾಗಿತ್ತು.