ಭಂಡಾರದೊಡೆಯ ಮಾಳಿಂಗರಾಯನ ಅದ್ಧೂರಿ ಜಾತ್ರೆ

KannadaprabhaNewsNetwork |  
Published : Oct 22, 2025, 01:03 AM IST
21ಸಿಡಿಎನ್‌01 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಹಾಲುಮತ ಸಮಾಜದ ಕಾಶಿ ಎಂದೇ ಖ್ಯಾತಿಯಾಗಿರುವ ಕರ್ನಾಟಕ ಗಡಿಯಲ್ಲಿರುವ ಮಹಾರಾಷ್ಟ್ರದ ಹುಲಜಂತಿ ಮಾಳಿಂಗರಾಯನ ಜಾತ್ರೆ ನಿಮಿತ್ತ ಸೋಮವಾರ ಭಕ್ತಸಾಗರವೇ ಹರಿದು ಬಂದಿತ್ತು. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಹುಲಜಂತಿ ಗ್ರಾಮದಲ್ಲಿ 14ನೇ ಶತಮಾನದಲ್ಲಿ ಬಾಳಿ ಬದುಕಿ ಹಲವು ಪವಾಡ ಮಾಡಿ ಜನಮಾನಸದಲ್ಲಿ ಉಳಿದಿರುವ ಪವಾಡ ಪುರುಷ ಮಾಳಿಂಗರಾಯನ ದೇವಾಲಯಕ್ಕೆ ಸಾಕ್ಷಾತ್, ಪರಶಿವನೇ ದೀಪಾವಳಿ ಅಮಾವಾಸ್ಯೆ ರಾತ್ರಿ ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ.

ಕನ್ನಡಪ್ರಭ ವಾರ್ತೆ ಚಡಚಣ

ಹಾಲುಮತ ಸಮಾಜದ ಕಾಶಿ ಎಂದೇ ಖ್ಯಾತಿಯಾಗಿರುವ ಕರ್ನಾಟಕ ಗಡಿಯಲ್ಲಿರುವ ಮಹಾರಾಷ್ಟ್ರದ ಹುಲಜಂತಿ ಮಾಳಿಂಗರಾಯನ ಜಾತ್ರೆ ನಿಮಿತ್ತ ಸೋಮವಾರ ಭಕ್ತಸಾಗರವೇ ಹರಿದು ಬಂದಿತ್ತು. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಹುಲಜಂತಿ ಗ್ರಾಮದಲ್ಲಿ 14ನೇ ಶತಮಾನದಲ್ಲಿ ಬಾಳಿ ಬದುಕಿ ಹಲವು ಪವಾಡ ಮಾಡಿ ಜನಮಾನಸದಲ್ಲಿ ಉಳಿದಿರುವ ಪವಾಡ ಪುರುಷ ಮಾಳಿಂಗರಾಯನ ದೇವಾಲಯಕ್ಕೆ ಸಾಕ್ಷಾತ್, ಪರಶಿವನೇ ದೀಪಾವಳಿ ಅಮಾವಾಸ್ಯೆ ರಾತ್ರಿ ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ, ಸೋಮವಾರ 198 ನೋಡಲು ಕರ್ನಾಟಕ, ಮಹಾರಾಷ್ಟ್ರ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರು ಆಗಮಿಸಿ ಮುಂಡಾಸ ನೋಡಿ ಪಾವನರಾದರು.ಭಕ್ತರು ತೂರಿದ ಭಂಡಾರ, ಉಣ್ಣೆ, ಉತ್ತತ್ತಿ, ನೆಲದ ಮೇಲೆ ಹಾಸಿಗೆಯನ್ನೇ ಸೃಷ್ಟಿಸಿದಂತಿತ್ತು. ಭಕ್ತರು ತೂರಿದ ಭಡಾರ ಬಾನಿಗೆ ಹಳದಿ ಲೇಪನದಂತೆ ಚಿತ್ತಾರವನ್ನೇ ಮೂಡಿಸಿತ್ತು. ಭಾನುವಾರ ಮಧ್ಯಾಹ್ನ ಜತ್ತ ಸರ್ಕಾರದ ಅಗಲ(ನೈವೇದ್ಯ)ದೊಂದಿಗೆ ಮಾಳಿಂಗರಾಯನ ಭಕ್ತರು ದೇವರಿಗೆ ನೈವೇದ್ಯ ಸಲ್ಲಿಕೆ ಜರುಗಿತು. ಶಿಖರಕ್ಕೆ ಸುತ್ತಿದ ಮುಂಡಾಸ ಆಧಾರದ ಮೇಲೆ ಮಳೆ, ಬೆಳೆ, ಸುಖ, ಶಾಂತಿ, ಸಮೃದ್ಧಿ ಹಾಗೂ ರಾಜಕೀಯ ವಿಶ್ಲೇಷಿಸುವುದು ವಾಡಿಕೆ. ಭಾನುವಾರ ರಾತ್ರಿ ಸಾಕ್ಷಾತ್ ಪರಶಿವನೇ ಆಗಮಿಸಿ ದೇವಾಲಯಕ್ಕೆ ಮುಂಡಾಸ ಸುತ್ತಿದ್ದನ್ನು ನೋಡಿದ ಸಾರ್ವಜನಿಕರು ಪುನೀತರಾದರು.ಮಂಗಳವಾರ ಮಾಳಿಂಗರಾಯನ ದೇವಾಲಯದ ಮುಂಭಾಗದಲ್ಲಿರುವ ವಿಶಾಲವಾದ ಮೈದಾನದಲ್ಲಿ ಸುಮಾರು 7 ದೇವರುಗಳ ಪಲ್ಲಕ್ಕಿಗಳ ಭೇಟಿ ವೈಭವದಿಂದ ಜರುಗಿತು. ಈ ಭೇಟಿ ಕಾರ್ಯಕ್ರಮದಲ್ಲಿ ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಸಂಪ್ರದಾಯದಂತೆ ಪಲ್ಲಕ್ಕಿ ಹಾಗೂ ದೇವಾಲಯದ ಶಿಖರದ ಮೇಲೆ ರಾಶಿ ರಾಶಿಗಟ್ಟಲೆ, ಭಂಡಾರ, ಉತ್ತತ್ತಿ, ಉಣ್ಣೆ ತೂರಿ ಭಕ್ತರು ಹರಕೆ ತೀರಿಸಿದರು. ಜಾತ್ರೆಯಲ್ಲಿ ಭಂಡಾರ ಮಾರಾಟ, ನಾಟಕ, ಸಂಗೀತ, ಕುಣಿತ ಸೇರಿ ಮಕ್ಕಳ ಮನರಂಜನೆ ಆಟಿಕೆಗಳು ಆಕರ್ಷಿಸಿದವು. ದೇವಾಲಯದ ಸಮಿತಿಯವರು ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ರಕ್ಷಣೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿದ್ದರು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ