ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿನಾಡಿನಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿದೆ. ರಾಜ್ಯದ ಗಡಿಯಂಚಿನ ಪ್ರದೇಶ ಇಂಡಿ ತಾಲೂಕಿನಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹ ಹಾಗೂ ಮಳೆಯಿಂದಾದ ಸಂಕಷ್ಟವನ್ನು ಮರೆದು ಜನರು ಹಬ್ಬವನ್ನು ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಹಬ್ಬದ ಖರೀದಿಯೂ ಕೂಡ ಜೋರಾಗಿದ್ದು, ಎಲ್ಲೆಡೆ ಮಾರುಕಟ್ಟೆಗಳು, ವಾಹನಗಳ ಶೋ ರೂಂ, ಆಭರಣ ಮಳಿಗೆಗಳು, ಅಲಂಕಾರಿಕ ಸಾಮಗ್ರಿಗಳು ಅಂಗಡಿ, ಪಟಾಕಿಗಳ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ. ಮಂಗಳವಾರ ಅಮವಾಸೆ ಹಾಗೂ ಬುಧವಾರ ಪಾಢ್ಯಯ ಲಕ್ಷ್ಮೀ ಪೂಜೆಗಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ಬ್ಯುಜಿಯಾಗಿದ್ದರು. ನಗರದ ಮಾರುಕಟ್ಟೆಗಳಲ್ಲಿ ಮಂಗಳವಾರ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇನ್ನು, ಪೂಜೆಗೆ ಅಗತ್ಯವಾಗಿ ಬೇಕಾದ ಹೂವು, ಹಣ್ಣುಗಳು, ಬಾಳೆದಿಂಡು, ಕಬ್ಬು, ಹಣತೆ, ಆಲಂಕಾರಿಕ ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಬೆಲೆ ಏರಿಕೆಯನ್ನು ಲೆಕ್ಕಿಸದೇ ಜನರು ಖರೀದಿಯಲ್ಲಿ ತೊಡಗಿದ್ದರು.ಅಲ್ಲದೇ, ಈ ಬಾರಿ ವಾಹನಗಳನ್ನು ಕೊಳ್ಳುವವರಿಗೆ ಜಿಎಸ್‌ಟಿ ಕಡಿತ ಅನುಕೂಲವಾಗಿದೆ. ಜನರು ಹಬ್ಬಕ್ಕೆ ವಾಹನಗಳನ್ನು ಕೊಳ್ಳಲು ಮುಂದಾಗಿದ್ದು, ಬೈಕ್‌ಗಳು, ಟ್ರ್ಯಾಕ್ಟರ್, ಕಾರ್ ಕೊಳ್ಳುತ್ತಿದ್ದಾರೆ. ಹೀಗಾಗಿ, ವಾಹನಗಳ ಶೋ ರೂಂಗಳು ಜನರಿಂದ ತುಂಬಿ ತುಳುಕುತ್ತಿವೆ. ಮಾರುಕಟ್ಟೆಗಳಲ್ಲಿ ಮಣ್ಣಿನ ಹಣತೆಗಳನ್ನು ರಸ್ತೆ ಬದಿಗಳಲ್ಲೇ ರಾಶಿ ಹಾಕಲಾಗಿದೆ. ಪಟ್ಟಣದ ಬಸವೇಶ್ವರ, ಅಂಬೇಡ್ಕರ ವೃತ್, ಸ್ಟೇಷನ್ ರಸ್ತೆಯಲ್ಲಿ ಹೂವು, ಹಣ್ಣು, ಬಾಳೆ ದಿಂಡು, ಕಬ್ಬು ಸೇರಿದಂತೆ ವಿವಿಧ ಸಾಮಗ್ರಿಗಳ ಮಾರಾಟ ಜೋರಾಗಿತ್ತು. ತರಕಾರಿ, ದಿನಸಿ ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ವೀಳ್ಯದೆಲೆ, ತೆಂಗಿನಕಾಯಿ ಖರೀದಿ ಜೋರಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಪಟಾಕಿ ಮಾರಾಟ ಅಂಗಡಿಗಳನ್ನು ತೆರೆಯಲಾಗಿದ್ದು, ಜನರು ಕೂಡ ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಹೂ, ಹಣ್ಣುಗಳ ಬೆಲೆ ಗಗನಕ್ಕೆ:
ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನತೆ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲು, ಲಕ್ಷ್ಮೀ, ಅಂಗಡಿ ಪೂಜೆ ಮಾಡಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹೊಸಬಟ್ಟೆ, ಹಬ್ಬದ ಪೂಜೆಗಾಗಿ ವಿವಿಧ ಸಾಮಗ್ರಿ ಖರೀದಿ ಜೋರಾಗಿದೆ. ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದ್ದು ಗ್ರಾಹಕರಿಗೆ ಬಿಸಿಮುಟ್ಟಿದೆ. ಸೇಬುಹಣ್ಣು 1 ಕೆಜಿಗೆ ₹ 120-150, ದ್ರಾಕ್ಷಿ ಕೆಜಿಗೆ ₹ 200, ದಾಳಿಂಬೆ ಕೆಜಿಗೆ ₹ 150, ಮೊಸಂಬಿ ಕೆಜಿಗೆ ₹ 80, ಬಾಳೆಹಣ್ಣು ಡಜನ್‌ಗೆ ₹ 50 ರಿಂದ 60 ದರವಿತ್ತು. ಇನ್ನು ಹೂವಿನ ದರ ಗಗನಮುಖಿಯಾಗಿದೆ. ಸೇವಂತಿ, ಕಾಕಡ, ಮಲ್ಲಿಗೆ, ಕನಕಾಂಬರ ಗುಲಾಬಿ, ದುಂಡು ಸೇವಂತಿ ಸೇರಿ ಹಲವು ಹೂಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ.ದೀಪಾವಳಿ ಸಂಭ್ರಮದಲ್ಲಿ ಪೂಜೆಗಾಗಿ ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ಪುರುಷರು, ಮಹಿಳೆಯರು ಅಂಗಡಿ, ಹೂವಿನ ಮಳಿಗೆಯ ಮುಂದೆ ಮುಗಿಬಿದ್ದಿರುವ ದೃಶ್ಯ ಕಂಡು ಬಂತು.