ಪೊಲೀಸರ ಸೇವೆ, ತ್ಯಾಗ ಅನನ್ಯ : ಡಿಸಿ ಸಂಗಪ್ಪ

KannadaprabhaNewsNetwork |  
Published : Oct 22, 2025, 01:03 AM IST
 (ಫೋಟೊ 21ಬಿಕೆಟಿ1, ಪೊಲೀಸ್ ಹುತಾತ್ಮರ ದಿನಾಚರಣೆ | ಸ್ಮಾರಕಕ್ಕೆ ಹೂ ಗುಚ್ಚ ಸಮರ್ಪಣೆ ಮಾಡಿದ ಡಿಸಿ ಸಂಗಪ್ಪ) | Kannada Prabha

ಸಾರಾಂಶ

ನಾಡಿನ ಭದ್ರತೆಗಾಗಿ ದೇಶದ ಗಡಿ ಕಾಯುವ ಸೈನಿಕರಂತೆ, ಸಮಾಜದ ಶಾಂತಿ ಸುವ್ಯವಸ್ಥೆ ಕಾಯುವ ಪೊಲೀಸರು ಸೇವೆ ಮತ್ತು ತ್ಯಾಗ ಅನನ್ಯವಾದುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾಡಿನ ಭದ್ರತೆಗಾಗಿ ದೇಶದ ಗಡಿ ಕಾಯುವ ಸೈನಿಕರಂತೆ, ಸಮಾಜದ ಶಾಂತಿ ಸುವ್ಯವಸ್ಥೆ ಕಾಯುವ ಪೊಲೀಸರು ಸೇವೆ ಮತ್ತು ತ್ಯಾಗ ಅನನ್ಯವಾದುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ನವನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ತ್ಯಾಗ, ಧೈರ್ಯ ಮತ್ತು ಕರ್ತವ್ಯನಿಷ್ಠೆಯ ಪ್ರತೀಕವಾಗಿದ್ದು, ದೇಶದ ಭದ್ರತೆಗೆ ತ್ಯಾಗ ಮಾಡಿದವರನ್ನು ಸ್ಮರಿಸುವ ದಿನವಾಗಿದೆ ಎಂದು ಹೇಳಿದರು.

ಹುತಾತ್ಮನ ಹಿಂದೆ ಒಂದು ಕುಟುಂಬವಿದ್ದು, ತಾಯಿ, ಪತ್ನಿ, ಮಕ್ಕಳು, ತಂದೆ ಪ್ರತಿದಿನವೂ ಆ ತ್ಯಾಗ ನೆನಪಿಸಿಕೊಳ್ಳುತ್ತಾರೆ. ಹುತಾತ್ಮರ ತ್ಯಾಗ ನಮ್ಮ ಸ್ವಾತಂತ್ರ್ಯ, ನಮ್ಮ ಶಾಂತಿ, ಮತ್ತು ನಮ್ಮ ಪ್ರಜಾಪ್ರಭುತ್ವದ ಭದ್ರತೆಯ ಬೆಲೆಯಾಗಿದೆ. ಮಾನವನ ಜೀವನದ ಮೌಲ್ಯವನ್ನು ಅರಿತವನಿಗೆ, ಇತರರ ಜೀವನದ ಮೌಲ್ಯವೂ ಅರಿವಾಗುತ್ತದೆ. ಈ ಅರಿವಿನಿಂದಲೇ ನಮ್ಮ ಪೊಲೀಸ್ ಸಹೋದರರು ತಮ್ಮ ಜೀವವನ್ನೂ ತ್ಯಜಿಸಿ, ಇತರರ ಜೀವವನ್ನು ಉಳಿಸಿದ್ದಾರೆ ಎಂದು ಹೇಳಿದರು.

ನಮ್ಮ ಸೈನಿಕರು ಗಡಿಗಳಲ್ಲಿ ನಿಂತು ದೇಶದ ಗರಿಮೆ ಕಾಯುತ್ತಾರೆ, ಪೊಲೀಸರು ಬೀದಿಗಳಲ್ಲಿ ನಿಂತು ಜನರ ಶಾಂತಿ ಕಾಯುತ್ತಾರೆ. ಆದರೆ ಇವರಿಬ್ಬರ ಹೃದಯದಲ್ಲಿರುವುದು ಒಂದೇ ಶಕ್ತಿ ದೇಶಪ್ರೇಮ. ಪೊಲೀಸ್ ವೇಷದ ಹಿಂದೆ ಒಂದು ಮೃದು ಹೃದಯವಿದೆ ಎಂದು ಅಭಪ್ರಾಯಪಟ್ಟರು.

ನಾವೆಲ್ಲರೂ ಹುತಾತ್ಮರ ತ್ಯಾಗ ಸ್ಮರಿಸಿ ಶಾಂತಿ ಮತ್ತು ನ್ಯಾಯ ಕಾಪಾಡುವ ಸಂಕಲ್ಪ ಮಾಡಲು ಕರೆ ನೀಡಿದ ಅವರು, ನಾವೆಲ್ಲರೂ ತಲೆಬಾಗಿ ಹುತಾತ್ಮರ ಆತ್ಮಶಾಂತಿಗಾಗಿ ಪ್ರಾರ್ಥಿಸೋಣ. ಅವರ ಬಲಿದಾನ ನಮ್ಮ ಪಾಠವಾಗಲಿ, ಅವರ ಧೈರ್ಯ ನಮ್ಮ ಮಾರ್ಗವಾಗಲಿ, ವೀರರ ನಾಡು ಭಾರತ, ವೀರರ ಸ್ಮರಣೆ ನಮ್ಮ ಶಕ್ತಿ ಎಂದು ಅವರ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಒಂದು ವರ್ಷದಲ್ಲಿ ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಾಣ ತ್ಯಾಗ ಮಾಡಿದ ರಾಷ್ಟ್ರದ 191 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಹೆಸರನ್ನು ಓದಿದರು.

ಪ್ರಾರಂಭದಲ್ಲಿ ವಿವಿಧ ಗಣ್ಯರು, ಹುತಾತ್ಮರಾದ ಪೊಲೀಸ್ ಕುಟುಂಬದ ಸದಸ್ಯರು. ರೈತರು, ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಪರೇಡ್ ಕಮಾಂಡರ್‌ ಡಿಎಆರ್ ಶಿವಾನಂದ ವನಂಜಕರ ಅವರ ನಾಯಕತ್ವದಲ್ಲಿ ಪರೇಡ್ ಮೂಲಕ ಗೌರವ ಸಲ್ಲಿಸಲಾಯಿತು.

ಪೊಲೀಸ್ ಬ್ಯಾಂಡ್ ತಂಡವು ಅತ್ಯಂತ ಸುಮಧುರವಾಗಿ ವಾದ್ಯ ನುಡಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!