ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.17ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಸೋಮವಾರ ಬೆಳಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತರುವ ಮುಹೂರ್ತದೊಂದಿಗೆ ಜಾತ್ರೆಗೆ ಕ್ಷಣಗಣನೆ ನಡೆದಿದೆ. ಪ್ರತಿ ಬಾರಿ ರಥ ಕಟ್ಟುವ ಸ್ಥಳದಲ್ಲಿ ಒಂದಲ್ಲ ಒಂದು ಬಿಲ್ವಪತ್ರೆ, ತುಳಸಿ, ಹೂವುಗಳು ಭೂಸ್ಪರ್ಶ ಮಾಡುತ್ತಿದ್ದು, ಈ ಬಾರಿ ಮಲ್ಲಿಗೆ ಮತ್ತು ಬಿಲ್ವಪತ್ರೆಯೊಂದು ಭೂ ಸ್ಪರ್ಶ ಮಾಡಿ ಜಾತ್ರೆಗೆ ಪೂರ್ಣಾನುಗ್ರಹ ಸೂಚಿಸಿದೆ.ಬೆಳಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಮಲ್ಲಿಗೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಅರ್ಚಕರು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಆರಂಭದಲ್ಲಿ ದೇವಳದ ನೌಕರರು ರಥದ ಹಿಂಬದಿಯ ಚಕ್ರಕ್ಕೆ ದಂಡೆ ಇಟ್ಟು ಚಕ್ರಕ್ಕೆ ಚಾಲನೆ ನೀಡಿದರು. ಬ್ರಹ್ಮರಥವನ್ನು ಕ್ರೈನ್ ಸಹಾಯದಿಂದ ಹೊರಗೆಳೆಯುವ ಕೆಲಸ ನಿರ್ವಹಿಸಲಾಯಿತು.

ದೇವಾಲಯದ ಕೆಲಸಗಾರರು ಸೇರಿ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸಿದರು. ರಥಬೀದಿಗೆ ರಥವನ್ನು ತಂದಾಗ ರಥದ ದಂಡೆಯಲ್ಲಿದ್ದ ಬಿಲ್ವಪತ್ರೆ, ತುಳಸಿ, ಬಿಳಿ ಪುಷ್ಪಗಳ ಪೈಕಿ ಬಿಲ್ವಪತ್ರೆ ಮತ್ತು ಮಲ್ಲಿಗೆಯ ಹಾರವೊಂದು ಭೂಸ್ಪರ್ಶ ಮಾಡಿದೆ. ಬಳಿಕ ಬ್ರಹ್ಮರಥವನ್ನು ಅದೇ ಸ್ಥಳದಲ್ಲಿ ನಿಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು, ಮಹಾಲಿಂಗೇಶ್ವರ ದೇವರ ಜಾತ್ರೆಯು ವರ್ಷಂಪ್ರತಿಯಂತೆ ಸಡಗರ ಸಂಭ್ರಮದಿಂದ ನಡೆಯಲಿದೆ. ಏ.1ಕ್ಕೆ ಗೊನೆ ಮುಹೂರ್ತ ನಡೆಯಲಿದೆ. ಏ.10ರಿಂದ ಏ.20ರ ತನಕ ಜಾತ್ರೋತ್ಸವ ನಡೆಯಲಿದೆ. ಜಾತ್ರೆಯ ಪೂರ್ವ ಸಿದ್ಧತೆಯಾಗಿ ಎಲ್ಲಾ ಭಕ್ತರ ಸಹಕಾರದಿಂದ ಬ್ರಹ್ಮರಥವನ್ನು ರಥಬೀದಿಗೆ ತಂದು ಇರಿಸಲಾಗಿದೆ. ಇನ್ನು ರಥ ಕಟ್ಟುವ ಕೆಲಸ ಆರಂಭಗೊಳ್ಳಲಿದೆ. ಅದೇ ದೇವಳದ ರಾಜಾಂಗಣದಲ್ಲಿ ಪುನರ್‌ನಿರ್ಮಾಣಗೊಳ್ಳಲಿರುವ 5 ಕಟ್ಟೆಗಳ ಕೆಲಸವೂ ನಡೆಯುತ್ತಿದೆ. ಏ.1ರೊಳಗೆ ಪೂರ್ಣಗೊಳ್ಳಲಿದೆ. ಅಶ್ವತ್ಥಕಟ್ಟೆಯ ಕೆಲಸವೂ ಪೂರ್ಣಗೊಳ್ಳಲಿದೆ. ದೇವಳದ ಎದುರುಗದ್ದೆಯಲ್ಲಿ ಸ್ವಚ್ಛತಾ ಕೆಲಸ ನಡೆದಿದೆ. ಈ ಹಿಂದಿಗಿಂತಲೂ ದೇವಳದ ಎದುರು ಮೈದಾನ ಇನ್ನಷ್ಟು ವಿಶಾಲವಾಗಿದೆ. 40 ಸೆಂಟ್ಸ್ ಜಾಗ ಖರೀದಿ ಮಾಡಿದ್ದೇವೆ. ಕಂಬಳದ ಕರೆ, ಕಂಬಳದ ಸ್ಟೇಜ್ ತೆರವು ಮಾಡಲಾಗುತ್ತಿದೆ. ಹಳೆಯ ಗೋಶಾಲೆ ಹೋಗಿ ವಿಸ್ತಾರವಾಗಿ ಮೈದಾನ ನಿರ್ಮಾಣ ಆಗಿದೆ. ಮುಂದಿನ ದಿನ ಪುತ್ತೂರು ಜಾತ್ರೆ ವೈಭವದಿಂದ ನಡೆಯುವ ಮೂಲಕ ಎಲ್ಲರಿಗೂ ದೇವರು ಆಶೀರ್ವಾದ ಮಾಡಲಿ ಎಂದು ಹೇಳಿದರು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕಚೇರಿ ಸಹಾಯಕ ಪದ್ಮನಾಭ, ಪಿ.ಜಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.