ಆತ್ಮಭೂಷಣ್‌ ಮಂಗಳೂರು:

ಮಧ್ಯಪ್ರಾಚ್ಯ ಯುದ್ಧ ಸನ್ನಿವೇಶದಿಂದ ಎಲ್ಲೆಡೆಗೆ ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಟ್ರಬಲ್‌ ಕಾಣಿಸಿರುವಂತೆಯೇ ಎಲ್ಲ ಕಡೆಗಳಲ್ಲಿ ಮೊಬೈಲ್‌ ಮತ್ತಿತರ ಎಲೆಕ್ಟ್ರಾನಿಕ್‌ ಉಪಕರಣಗಳು ದುಬಾರಿಯಾಗಿದ್ದು, ಕೈಸುಡುವ ಹಂತ ತಲುಪಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಏಕಾಏಕಿ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಬಳಸುವ ‘ಮೈಕ್ರೋ ಚಿಪ್‌’ ಉತ್ಪಾದನೆ ಕೊರತೆ ಹಾಗೂ ದಿಢೀರ್‌ ಬೆಲೆ ಏರಿಕೆಯಾಗಿದ್ದು, ಇದು ಗ್ರಾಹಕರಿಗೆ ಹಾಗೂ ಎಲೆಕ್ಟ್ರಾನಿಕ್‌ ಅಂಗಡಿಗಳಿಗೆ ಬರೆ ಹಾಕುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿಪ್‌ ಹೊಂದಿರುವ ಹೊಸ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುವ ಪರಿಸ್ಥಿತಿ ತಲೆದೋರಿದೆ. ಏನಿದು ‘ಮೈಕ್ರೋ ಚಿಪ್‌’ ?: ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಬೇಕಾಗುವ ‘ಮೈಕ್ರೋ ಚಿಪ್‌’(ಸೂಕ್ಷ್ಮ ಉಪಕರಣ) ಜಾಗತಿಕವಾಗಿ ತೈವಾನ್‌, ದಕ್ಷಿಣ ಕೊರಿಯಾ, ಚೀನಾ ಮತ್ತು ಅಮೆರಿಕಗಳಲ್ಲಿ ಉತ್ಪಾದನೆಯಾಗುತ್ತಿದೆ. ಚಿಪ್‌ಗಳ ವಿನ್ಯಾಸದಲ್ಲಿ ಅಮೆರಿಕ ಮೊದಲ ಸ್ಥಾನ ಹೊಂದಿದೆ. ವಿವಿಧ ಮೊಬೈಲ್‌ ಉತ್ಪಾದಕ ಕಂಪನಿಗಳು ಅಗ್ಗದ ದರದ ಕಾರಣಕ್ಕೆ ಎಲೆಕ್ಟ್ರಾನಿಕ್‌ ಚಿಪ್‌ಗಳಿಗೆ ಅಮೆರಿಕವನ್ನು ನೆಚ್ಚಿಕೊಂಡಿವೆ. ಪ್ರಸಕ್ತ ನಡೆಯುತ್ತಿರುವ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧಕ್ಕೂ ಇದಕ್ಕೂ ಸಂಬಂಧವೇ ಇಲ್ಲದಿದ್ದರೂ ಮಾರುಕಟ್ಟೆಯಲ್ಲಿ ಚಿಪ್‌ನ ಕೊರತೆ ಉಂಟಾಗಿದೆ. ಹೀಗಾಗಿ ಚಿಪ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದುವೇ ಮೊಬೈಲ್‌ ಮತ್ತಿತರ ಎಲೆಕ್ಟ್ರಾನಿಕ್‌ ವಸ್ತುಗಳ ದುಬಾರಿ ಬೆಲೆಗೆ ಕಾರಣವಾಗಿದೆ ಎನ್ನುವುದು ಪುತ್ತೂರಿನ ಮೊಬೈಲ್‌ ಮಾರಾಟ ಮಳಿಗೆಯೊಂದರ ಮಾಲೀಕರ ಅಭಿಪ್ರಾಯ.ನಿಜವಾಗಿಯೂ ಚಿಪ್‌ ಕೊರತೆಯೇ?: ಎಲೆಕ್ಟ್ರಾನಿಕ್‌ ಚಿಪ್‌ಗಳನ್ನು ಕೇವಲ ಅಮೆರಿಕ ಮಾತ್ರವಲ್ಲ ಬೇರೆ ರಾಷ್ಟ್ರಗಳೂ ಉತ್ಪಾದಿಸುತ್ತಿವೆ. ಆದರೆ ಎಲೆಕ್ಟ್ರಾನಿಕ್‌ ಮಾರುಕಟ್ಟೆಯಲ್ಲಿ ಚಿಪ್‌ ಕೊರತೆಗೆ ಅಮೆರಿಕದತ್ತ ಬೆರಳು ತೋರಿಸಲಾಗುತ್ತಿದೆ. ಅಮೆರಿಕದಲ್ಲಿ ಚಿಪ್‌ ಉತ್ಪಾದನೆ ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ಬೇಡಿಕೆಯಷ್ಟು ಪೂರೈಕೆ ಇಲ್ಲದೆ ಮೊಬೈಲ್‌ ಫೋನ್‌ ಮುಂತಾದ ಎಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದಕ ಕಂಪನಿಗಳು ಚಿಪ್‌ಗೆ ಪರದಾಟ ನಡೆಸುವಂತಾಗಿದೆ. ಇದು ನಿಜವಾದ ಕೊರತೆಯೋ ಅಥವಾ ಕೃತಕ ಅಭಾವ ಸೃಷ್ಟಿಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಮೊಬೈಲ್‌ ಕಂಪನಿಗಳು ಅಥವಾ ಏಜೆನ್ಸಿಗಳಿಗೆ ನಿಖರ ಮಾಹಿತಿ ಇಲ್ಲ. ಆದರೆ ಮೊಬೈಲ್‌ ಫೋನ್‌, ಮೆಮೊರಿ ಕಾರ್ಡ್‌, ಪೆನ್‌ಡ್ರೈವ್‌, ಹಾರ್ಡ್‌ಡಿಸ್ಕ್‌, ಗ್ರಾಫಿಕ್‌ ಕಾರ್ಡ್‌, ಕಂಪ್ಯೂಟರ್‌ಗಳ ರ್‍ಯಾಮ್‌ಗೆ ಸಂಬಂಧಿಸಿದ ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದಂತೂ ಸತ್ಯ.

ದುಬಾರಿ ದರ ಏರಿಕೆ: ಆ್ಯಪಲ್‌ ಐಫೋನ್‌ ಹೊರತುಪಡಿಸಿ ಬೇರೆ ಎಲ್ಲ ಮೊಬೈಲ್‌ ಕಂಪನಿಗಳ ಮೊಬೈಲ್‌ ಹ್ಯಾಂಡ್‌ಸೆಟ್‌ಗಳ ಬೆಲೆ ಗಗನ ಮುಖಿಯಾಗಿದೆ. ಕಳೆದ ಒಂದು ತಿಂಗಳಿಂದ ದರ ಏರುಗತಿಯಲ್ಲಿದ್ದು, ಮಧ್ಯಪ್ರಾಚ್ಯ ಯುದ್ಧ ಶುರುವಾದಲ್ಲಿಂದ ಮೊಬೈಲ್‌ ಮಾರುಕಟ್ಟೆಯಲ್ಲೂ ದರ ಗ್ರಾಹಕರನ್ನು ಸುಡಲಾರಂಭಿಸಿದೆ. ಸ್ಮಾರ್ಟ್‌ಫೋನ್‌ಗಳ ಬೆಲೆ 2 ಸಾವಿರ ರು.ನಿಂದ 5 ಸಾವಿರ ರು. ವರೆಗೆ ಹಠಾತ್‌ ಏರಿಕೆ ಕಾಣುತ್ತಿದೆ. ಹೀಗಾಗಿ ಮೊಬೈಲ್‌ ಫೋನ್‌ಗಳ ಬೆಲೆ ಏರಿಕೆ ಗ್ರಾಹಕರ ಕಿಸೆಗೆ ಕನ್ನ ಹಾಕುತ್ತಿದ್ದು, ಇದು ಸದ್ಯದ ಪರಿಸ್ಥಿತಿಯಲ್ಲಿ ಹೀಗೆಯೇ ಮುಂದುವರಿಯುತ್ತಿದೆ.

ಬಾಕ್ಸ್‌ನಲ್ಲಿ ನಿಗದಿತ ದರ, ಮಾರಾಟ ದುಬಾರಿ!: ಮೊಬೈಲ್‌ ಫೋನ್‌ ಮಾರಾಟ ಮಳಿಗೆಗಳಲ್ಲಿ ಬಾಕ್ಸ್‌ಗಳಲ್ಲಿ ನಿಗದಿತ ದರ ನಮೂದಾಗಿರುತ್ತದೆ. ಆದರೆ ಮಾರಾಟ ಮಾಡುವುದು ಮಾತ್ರ ದುಬಾರಿ ದರಕ್ಕೆ. ಮೊಬೈಲ್‌ನ ಚಿಪ್‌ ಕೊರತೆ ಮುಂದಿಟ್ಟುಕೊಂಡು ಏಜೆನ್ಸಿಗಳು ದರ ಏರಿಕೆ ಮಾಡುತ್ತಿವೆ. ಇದೇ ಕಾರಣ ಹೇಳಿಕೊಂಡು ಮಳಿಗೆಗಳು ಗ್ರಾಹಕರಿಂದ ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ. ಮೊಬೈಲ್‌ ಬಾಕ್ಸ್‌ಪೀಸ್‌ನಲ್ಲಿ ನಿಗದಿತ ದರ ಇದ್ದರೂ ಹೆಚ್ಚಳಗೊಂಡ ದರ ಹಳೆ ದಾಸ್ತಾನುಗಳಲ್ಲಿ ನಮೂದು ಆಗಿರುವುದಿಲ್ಲ. ಹೀಗಾಗಿ ಏಜೆನ್ಸಿಗಳು ಅದೇ ಹಳೆ ಸ್ಟಾಕ್‌ ಮೊಬೈಲ್‌ ಸೆಟ್‌ಗಳನ್ನು ಕಳುಹಿಸಿದಾಗ ಗ್ರಾಹಕರಿಗೆ ಮನವರಿಕೆ ಮಾಡುವಲ್ಲಿ ಮಳಿಗೆಯವರು ಹೆಣಗಾಡಬೇಕಾಗುತ್ತದೆ. ಚಿಪ್‌ ಕೊರತೆ ಮುಂದಿಟ್ಟುಕೊಂಡು ಮೊಬೈಲ್‌, ನೋಟ್‌ಪ್ಯಾಡ್‌ಗಳ ದರ ನಾಲ್ಕೈದು ಸಾವಿರ ರು. ವರೆಗೆ ಹಠಾತ್‌ ಏರಿಕೆ ಮಾಡಿರುವುದು ಸರಿಯಲ್ಲ. ಇದರಿಂದ ಗ್ರಾಹಕರು ವಿನಾ ಕಾರಣ ದುಬಾರಿ ದರ ನೀಡಿ ಮೊಬೈಲ್‌ ಖರೀದಿಸುವಂತಾಗಿದೆ.


- ರವಿ, ಗ್ರಾಹಕರ, ಪುತ್ತೂರು