ಹಾನಗಲ್ಲ: ರೈತರು ಸಾಲದ ದಾಸರಾಗುವುದು ಬೇಡ ಎಂದರೆ, ಸಾವಯವ ಕೃಷಿಗೆ ಮನಸ್ಸು ಮಾಡಿ. ಗೋ ಪಾಲಕರಾಗಿ ರಾಸಾಯನಿಕ ಮುಕ್ತ ಕೃಷಿಗೆ ಮುಂದಾಗಿ. ವಿಷಮುಕ್ತ ಅನ್ನ ಆಹಾರ ನೀಡಲು ಮನಸ್ಸು ಮಾಡಿ ಎಂದು ಜಗದ್ಗುರು ಶಿರಹಟ್ಟಿಯ ಫಕೀರಸಿದ್ಧರಾಮ ಮಹಾಸ್ವಾಮಿಗಳು ಕರೆ ನೀಡಿದರು.
ಶಕ್ತಿ ಇರುವಾಗ ಭಕ್ತಿ ಮೆರೆಯಬೇಕು. ನಮ್ಮ ಮಾತು ಮನಸ್ಸು ಚೆನ್ನಾಗಿರಲಿ. ಅಂತಹಕರಣ ಶುದ್ಧವಾದ ನಡೆ ಇರಲಿ. ಒಳ್ಳೆಯದನ್ನು ಮಾಡಲಾಗದಿದ್ದರೂ ಒಳ್ಳೆಯದನ್ನು ನೋಡಿ ಮನಸ್ಸನ್ನು ಸಂತಸಗೊಳಿಸಿಕೊಳ್ಳಿ. ಈಗ ಸಾಂಪ್ರದಾಯಿಕ ಜೀವನದಿಂದ ಮನುಷ್ಯ ದೂರವಾಗುತ್ತಿರುವುದು ವಿಷಾದದ ಸಂಗತಿ. ತುಲಾಭಾರ ಎಂಬ ಭಕ್ತರ ಸೇವೆಯಲ್ಲಿ ಸಂಕಲ್ಪ ಸಿದ್ಧಿ ಇದೆ. ನಿಸರ್ಗವನ್ನು ಪ್ರೀತಿಸಿ ಗೌರವಿಸಿ. ಮನುಷ್ಯ ಈ ಭೂಮಿಯನ್ನು ಬಿಡುವಾಗ ಪುಣ್ಯದ ಗಂಟು ಕಟ್ಟಿಕೊಂಡು ಹೋಗಬೇಕು. ಅದೇ ನಿಜವಾದ ಜೀವನದ ಸಾರ್ಥಕತೆ ಎಂದರು.
ಕೂಡಲದ ಗುರುಮಹೇಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಯ ಯಾರಿಗೂ ಕಾಯುವುದಿಲ್ಲ. ಧರ್ಮ ರಕ್ಷಣೆಯ ಕಾಲದಲ್ಲಿ ನಾವಿದ್ದೇವೆ. ಗುರು ಹಿರಿಯರನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ಹಮ್ಮು-ಬಿಮ್ಮುಗಳನ್ನು ಬಿಟ್ಟು, ಮದ ಮತ್ಸರದಿಂದ ದೂರವಾಗಿ, ಅಹಂಕಾರವನ್ನು ಅಳಿಸಿ ಬದುಕನ್ನು ಹಸನು ಮಾಡಿಕೊಳ್ಳಿ ಎಂದರು.ಸಾವಯವ ಕೃಷಿ ಸಾಧಕ ಸಾಂವಸಗಿಯ ಶ್ರೀ ವೀರಭದ್ರೇಶ್ವರ ಟ್ರಸ್ಚ್ ಸಮಿತಿಯ ವೀರ ಕೃಷಿಕ ಪ್ರಶಸ್ತಿ ಪುರಸ್ಕೃತ ರೈತ ವಾಸುದೇವಮೂರ್ತಿ ಮೂಡಿ ಮಾತನಾಡಿ, ರೈತನ ತ್ಯಾಗದಿಂದಾಗಿ ಇಡೀ ಜಗತ್ತಿಗೆ ಅನ್ನ ಆಹಾರ ಸಿಗುತ್ತಿದೆ ಎಂಬ ಸತ್ಯವನ್ನು ನಿತ್ಯ ನೆನೆಯಬೇಕು. ಈಗ ರೈತ ಲೆಕ್ಕ ಹಾಕಿ ಕೃಷಿ ಕೈಗೊಳ್ಳಬೇಕು. ಭೂಮಿಯನ್ನು ಅರ್ಥ ಮಾಡಿಕೊಳ್ಳಬೇಕು. ರೈತನೂ ಆರ್ಥಿಕ ಸಬಲತೆ ಹೋಂದಬೇಕು. ಈಗಿನ ಆಹಾರ ಪದ್ಧತಿ ವಿಷಯುಕ್ತವಾಗಿದೆ. ಸಾವಯವ ಕೃಷಿಗೆ ದೊಡ್ಡ ಬೆಲೆ ಬರಲಿದೆ. ಅಂಧರಂತೆ ಆಹಾರವನ್ನು ಸ್ವೀಕರಿಸದಿರಿ. ನಾವು ಬಳಸುವ ಆಹಾರದಲ್ಲಿ ಇರುವ ವಿಷಯುಕ್ತತೆಯ ಪರೀಕ್ಷೆ ಬೇಕಾಗಿದೆ. ಆ ಕಾಣಕ್ಕಾಗಿಯೇ ಈಗ ರೋಗ ರುಜಿನಗಳು ಹೆಚ್ಚಾಗುತ್ತಿವೆ ಎಂದು ಎಚ್ಚರಿಸಿದರು.
ವನಿತಾ ಕುಂಟನಹೊಸಳ್ಳಿ ಪ್ರಾರ್ಥನೆ ಹಾಡಿದರು. ಮಂಜುನಾಥ ದೊಡ್ಡಮನಿ ಸ್ವಾಗತಿಸಿದರು. ವೀರಣ್ಣ ದೊಡ್ಡಮನಿ ನಿರೂಪಿಸಿದರು.