ಕುಮಟಾ: ನಮ್ಮ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ನಾವೆಲ್ಲರೂ ದೇಶಕ್ಕೆ ಮತ್ತು ಸಮಾಜಕ್ಕೆ ಹೆಗಲು ಕೊಡುವ ವ್ಯಕ್ತಿಗಳಾಗಬೇಕಾಗಿದೆ. ವಿದ್ಯಾರ್ಥಿಗಳು ಸಾರ್ಥಕ ಶ್ರಮದ ಮೂಲಕ ಜೀವನ ಸಾರ್ಥಕತೆ ಗಳಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.
೮೫೦೦ ವರ್ಷಗಳ ಜಗತ್ತಿನ ಅತ್ಯಂತ ಜೀವಂತ ಪ್ರಾಚೀನ ನಗರ ವಾರಣಾಸಿ ಅಥವಾ ಕಾಶಿ. ಜಗತ್ತಿನಲ್ಲಿ ಬಹಳ ಪ್ರಾಚೀನ ಕಾಲದಲ್ಲಿ ಇದ್ದ ಎಷ್ಟೋ ದೇಶಗಳು ಈಗ ಇಲ್ಲ. ದೇಶ ಇದ್ದರೂ ಪ್ರಾಚೀನತೆಯೊಂದಿಗೆ ಕೊಂಡಿ ಕಳೆದುಕೊಂಡಿದೆ. ಆದರೆ ನಮ್ಮ ದೇಶದ ಪ್ರಾಚೀನತೆಯ ಹೆಗ್ಗುರುತುಗಳು ಇಂದಿಗೂ ಜೀವಂತವಾಗಿ ಚಾಲ್ತಿಯಲ್ಲಿರುವುದು ಈ ನೆಲದ ವಿಶೇಷ. ಶ್ರೀರಾಮ ಎಂದೂ ನಡವಳಿಕೆಯ ಗಡಿಗಳನ್ನು ದಾಟಿಲ್ಲ. ಆದ್ದರಿಂದಲೇ ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದರು.
ಹಿಂದೆ ಆಶ್ರಮ ವ್ಯವಸ್ಥೆಯಲ್ಲಿ ಅಧ್ಯಯನದ ಜತೆಗೆ ಭಿಕ್ಷೆ ಸಹ ತರಬೇಕಿತ್ತು. ಅದರಿಂದಲೇ ಗುರುಕುಲ ನಡೆಯಬೇಕಿತ್ತು. ಆದರೆ ಇಂದು ನಮ್ಮ ಪರವಾಗಿ ಯಾರೋ ಫೀ ಕಟ್ಟುತ್ತಾರೆ. ಹಿಂದೆ ನಮ್ಮ ಕಾಲದಲ್ಲಿ ಫ್ರೆಂಡ್ ಇದ್ದರು, ಆದರೆ ಇಂದು ಬೆಸ್ಟ್ ಫ್ರೆಂಡ್ ಪರಿಕಲ್ಪನೆ ಆರಂಭವಾಗಿದೆ ಎಂದರು. ಹೀಗೆ ನಮ್ಮ ವಿದ್ಯಾರ್ಥಿ ಜೀವನ ಬದಲಾಗಿದೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗೋರೆಯಂತಹ ಕುಗ್ರಾಮದಲ್ಲಿ ವಸತಿ ಸಹಿತ ಕಾಲೇಜು ಕಟ್ಟಿಸಿ ಡಾ.ಜಿ.ಜಿ.ಹೆಗಡೆ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರೆ ತಪ್ಪಾಗಲಾರದು. ಈ ಕಾಲೇಜಿನಲ್ಲಿ ಸಂಸ್ಕಾರಯುತವಾಗಿ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಿರುವ ಬಗ್ಗೆ ಧನ್ಯವಾದ ಹೇಳುತ್ತೇನೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಜಿಲ್ಲೆಯಲ್ಲೇ ಉನ್ನತ ಕಲಿಕೆ ಹಾಗೂ ಕನಸುಗಳನ್ನು ನನಸಾಗಿಸಿಕೊಳ್ಳುವಂತೆ ಹೆಚ್ಚಿನ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಸಹಕರಿಸುವಂತೆ ಬಿ.ಎಲ್.ಸಂತೋಷ ಅವರಲ್ಲಿ ವಿನಂತಿಸಿದರು.
ಶಿವಮೊಗ್ಗ ವಿಭಾಗ ಪ್ರಮುಖ ಗಿರೀಶ ಪಾಟೀಲ, ವಿಶ್ವಸ್ಥರಾದ ಡಾ. ಸೀತಾಲಕ್ಷ್ಮೀ ಹೆಗಡೆ, ಡಿ.ಎನ್.ಭಟ್, ಸಲಿಲಾ ಭಟ್ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ನಾಗರಾಜ ಹೆಗಡೆ ಸ್ವಾಗತಿಸಿದರು. ಪೂಜಾ ಭಟ್ ನಿರೂಪಿಸಿದರು. ರಮ್ಯಾ ಸಭಾಹಿತ ವಂದಿಸಿದರು.