ಬೊಕ್ಕಸಕ್ಕೆ ಯಾವುದೇ ನಷ್ಟ ಇಲ್ಲ: ಕಾಂಗ್ರೆಸ್ ಮುಖಂಡಕನ್ನಡಪ್ರಭ ವಾರ್ತೆ ಉಡುಪಿ
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಉಚಿತ ಗ್ಯಾರಂಟಿ ಯೋಜನೆಯಿಂದಾಗಿ, ನಮ್ಮ ರಾಜ್ಯವೀಗ ತಲಾ ಆದಾಯದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಆದ್ದರಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದ್ದಾರೆ.ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಾಗ ವಿಪಕ್ಷಗಳು ಅದನ್ನು ಬಿಟ್ಟಿ ಯೋಜನೆ, ಸೋಮಾರಿಗಳನ್ನು ಸೃಷ್ಟಿ ಮಾಡುವ ಯೋಜನೆ, ಬೊಕ್ಕಸವನ್ನು ಖಾಲಿ ಮಾಡುವ ಯೋಜನೆ ಎಂದೆಲ್ಲಾ ಟೀಕಿಸಿದ್ದವು. ಆದರೆ ಇಂದು ಅದೇ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ, ವಿಪಕ್ಷಗಳು ಬಾಯಿ ಮುಚ್ಚಿವೆ ಎಂದರು.ರಾಜ್ಯದ ಈ ಬಾರಿಯ ಬಜೆಟ್ ಮೊತ್ತ 4.90 ಲಕ್ಷ ಕೋಟಿ ರು.ಗಳಾಗಿದ್ದು, ಅದರಲ್ಲಿ ಅದರಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 1 ಲಕ್ಷ ಕೋಟಿ ರು. ಮಾತ್ರ ಬಳಕೆಯಾಗುತ್ತದೆ. ಉಳಿದ ಮೊತ್ತ ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಆದ್ದರಿಂದ ಬೊಕ್ಕಸಕ್ಕೆ ನಷ್ಟ ಇಲ್ಲ ಎಂದವರು ಸ್ಪಷ್ಟೀಕರಣ ನೀಡಿದರು.ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕರು ಹೇಳುತ್ತಿದ್ದಾರೆ, ಹಾಗಿದ್ದರೇ ಈ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕಾಮಗಾರಿಗಳ ದೊಡ್ಡದೊಡ್ಡ ಪ್ಲೆಕ್ಸ್‌ಗಳನ್ನು ಹಾಕಿ ಶಂಕು ಸ್ಥಾಪನೆ, ಉದ್ಘಾಟನೆ ಮಾಡುತಿದ್ದರಲ್ಲ, ಅವುಗಳಿಗೆ ಯಾರು ಅನುದಾನ ನೀಡುತಿದ್ದಾರೆ ಎಂದು ಸೊರಕೆ ಪ್ರಶ್ನಿಸಿದರು.ಗ್ಯಾರಂಟಿಗಳಿಂದ 1 ಲಕ್ಷ ಕೋಟಿ ರು. ನೇರವಾಗಿ ಜನರ ಕೈಗೆ ಸಿಗುತ್ತಿದೆ. ಇದರಿಂದ ಜನರು ನಿತ್ಯದ ವ್ಯವಹಾರಗಳಲ್ಲಿ ತೊಡಗಿಸುತ್ತಿದ್ದಾರೆ, ಮುಖ್ಯವಾಗಿ ಮಹಿಳೆಯರ ಖರೀದಿಸುವ ಮತ್ತು ತಿರುಗಾಡುವ ಶಕ್ತಿ ಹೆಚ್ಚಾಗಿದೆ. ಹೀಗೆ ಹಣ ಚಲಾವಣೆ ಹೆಚ್ಚಿದೆ, ಜನರ ಜೀವನ ಮಟ್ಟ ಹೆಚ್ಚಿದೆ ಎಂದ ಸೊರಕೆ ವಿಶ್ಲೇಷಿಸಿದರು.ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಡುಪಿ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್, ಕಾಪು ತಾಲೂಕು ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಉಪಸ್ಥಿತರಿದ್ದರು.