ಕನ್ನಡಪ್ರಭ ವಾರ್ತೆ ರಾಮನಗರ
ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿವೆ. ನಾವು ನಮ್ಮ ಆಸೆ ಅಭಿಲಾಷೆಗಳನ್ನು ವ್ಯಕ್ತಪಡಿಸಿದ್ದೇವೆ. ಈಗ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗಿದ್ದು, ಮುಂದೆ ಮುಖ್ಯಮಂತ್ರಿ ಆದಂತೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.ನಗರದ ರಂಗರಾಯನದೊಡ್ಡಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಡಿ.ಕೆ. ಶಿವಕುಮಾರ್ ರವರು ಉಪಮುಖ್ಯಮಂತ್ರಿಯಾಗಿದ್ದು, ಮುಖ್ಯಮಂತ್ರಿ ಆದಂಗೆ. ಅವರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಶೀರ್ವಾದ ಇಲ್ಲದಿದ್ದರೆ ಕೆಲಸ ಮಾಡಲು ಆಗುವುದಿಲ್ಲ ಎಂದರು.
ಮುಖ್ಯಮಂತ್ರಿ ಆಗಲು ಶಾಸಕರ ಸಂಖ್ಯೆಯೂ ಬೇಕು. ವರಿಷ್ಠರ ಆಶೀರ್ವಾದವೂ ಬೇಕು ಅಂತ ಸಿದ್ದರಾಮಯ್ಯರವರು ಹೇಳಿದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವರಿಷ್ಠರ ಆಶೀರ್ವಾದ ಇದ್ದರೆ ಸಾಕು ಅಂತ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿವೆ. ನಾವು ನಮ್ಮ ಆಸೆ ಅಭಿಲಾಷೆಗಳನ್ನು ವ್ಯಕ್ತಪಡಿಸಿದ್ದೇವೆ. ಮಾಧ್ಯಮಗಳಲ್ಲಿಯೂ ಅದು ಪ್ರಸಾರಗೊಂಡಿದೆ. ಮತ್ತೆ ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿ ವಿಚಾರವನ್ನು ಮಾಧ್ಯಮಗಳ ಎದುರು ಮತ್ತೆ ಪ್ರಸ್ತಾಪ ಮಾಡದಂತೆ ಹೈಕಮಾಂಡ್ ಆದೇಶಿಸಿದೆ. ನೀವು ಶಿಸ್ತಿನ ಸಿಪಾಯಿಯಾಗಿ ಶಿಸ್ತು ಪಾಲನೆ ಮಾಡುವಂತೆ ಹೈಕಮಾಂಡ್ ಲಗಾಮು ಹಾಕಿದೆ. ಅವರು ಹೇಳಿದಂತೆ ಚೌಕಟ್ಟಿನೊಳಗೆ ಕೆಲಸ ಮಾಡಿಕೊಂಡು ಹೋಗಬೇಕು. ಅದರಂತೆ ನಾವು ತಲೆಬಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು ಶಾಸಕ ಇಕ್ಬಾಲ್ ಹುಸೇನ್ ರವರ ತಾಕತ್ತನ್ನು ಮೆಚ್ಚಬೇಕು. ಹೈಕಮಾಂಡ್ ಸೂಚಿಸಿದರು ಮುಖ್ಯಮಂತ್ರಿ ವಿಚಾರ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಅಶೋಕಣ್ಣ ಕೆಲ ಸಂದರ್ಭದಲ್ಲಿ ನನ್ನನ್ನುಪ್ರೀತಿಸುತ್ತಾರೆ, ಇನ್ನು ಕೆಲಸ ಸಂದರ್ಭದಲ್ಲಿ ಡೈವರ್ಸ್ ನೋಟಿಸ್ ಕೊಟ್ಟಿ ಕಳುಹಿಸುತ್ತಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಬಗ್ಗೆ ನಾನು ಹೆಚ್ಚಿನ ಚರ್ಚೆ ಮಾಡಲ್ಲ. ಅದರ ಅವಶ್ಯಕತೆಯೂ ಇಲ್ಲ. ಅವರವರ ಸಿದ್ಧಾಂತ ಅವರಿಗೆ ಬಿಟ್ಟಿದ್ದು. ಕಾಂಗ್ರೆಸ್ ಬಡವರ ಪಕ್ಷ, ಎಲ್ಲ ವರ್ಗದ ಪಕ್ಷ. ಜಾತ್ಯತೀತ ಮತ್ತು ಧರ್ಮತೀತವಾಗಿ ಕೆಲಸ ಮಾಡಲು ರಾಮನಗರ ಕ್ಷೇತ್ರದ ಜನರು ಅವಕಾಶ ನೀಡಿದ್ದಾರೆ. ಅದರಂತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.ಸಚಿವ ಪ್ರಿಯಾಂಕ ಖರ್ಗೆ ರವರು ಆರ್‌ಎಸ್ಎಸ್ ಚಟುವಟಿಕೆ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರಲ್ಲ ಎಂಬ ಪ್ರಶ್ನೆಗೆ ಆರ್‌ಎಸ್ಎಸ್ ನವರು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಚರಣೆ ಮಾಡುತ್ತಿದ್ದು, ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡಲು ಇಷ್ಟವಿಲ್ಲ. ಜನರು ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು, ಕೆಟ್ಟದ್ದನ್ನು ತಿರಸ್ಕರಿಸುತ್ತಾರೆ ಎಂದು ಇಕ್ಬಾಲ್ ಹುಸೇನ್ ಉತ್ತರಿಸಿದರು.
ಕೆರೆಗೆ ಬಾಗಿನ:ರಂಗರಾಯನದೊಡ್ಡಿ ಕೆರೆ ಬಹಳ ದಿನಗಳಿಂದ ಭರ್ತಿಯಾಗಿರಲಿಲ್ಲ. ಈಗ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಬಾಗಿನ ಅರ್ಪಿಸಿ ಕೃತಜ್ಞತೆ ಸಲ್ಲಿಸಿದ್ದೇನೆ. ಕೆರೆಗೆ ಬಾಗಿನ ಅರ್ಪಿಸಿರುವುದು ನನ್ನ ಜೀವನದಲ್ಲಿ ಸುದಿನ. ಮಳೆರಾಯ ಕೃಪೆ ತೋರಿ ಕೆರೆ ಕಟ್ಟೆ ತುಂಬಿಸಿದ್ದು, ಬೆಳೆಗೆ ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ನಿಜಾಮುದ್ದೀನ್ ಷರೀಫ್, ಅಜ್ಮತ್, ಗಿರಿಜಮ್ಮ, ಬೈರೇಗೌಡ, ಸಮದ್, ವಿಜಯಕುಮಾರಿ, ಆಯುಕ್ತ ಜಯಣ್ಣ, ಪ್ರವಾಸೋದ್ಯ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮತ್ತಿತರರು ಹಾಜರಿದ್ದರು.-----
14ಕೆಆರ್ ಎಂಎನ್ 3.ಜೆಪಿಜಿರಾಮನಗರದ ರಂಗರಾಯನದೊಡ್ಡಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಬಾಗಿನ ಅರ್ಪಿಸಿದರು.------