ವಿದ್ಯಾವಂತರು ಹೆಚ್ಚಿದಂತೆ ವಿವೇಕವಂತರು ಕ್ಷೀಣ: ಡಾ.ಕೆ.ಅನಂತರಾಮು

KannadaprabhaNewsNetwork | Published : Jun 1, 2024 12:47 AM

ಸಾರಾಂಶ

ಪ್ರಸ್ತುತ ಶತಮಾನದ ದಿನಗಳಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಯೇ ನಡೆದುಹೋಗಿದೆ. ಹೆಣ್ಣುಮಕ್ಕಳ ವಿದ್ಯಾಭಾಸದ ವಿಷಯದಲ್ಲಿ ನಾವು ಕೆಲವು ದಶಕಗಳ ಹಿಂದೆ ಸ್ವಲ್ಪ ಹಿಂದೆ ಬಿದ್ದಿದ್ದೆವು. ಈಗ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಚೈತನ್ಯ ಉಂಟಾಗಿದೆ, ವೇಗೋತ್ಕರ್ಷವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಬುದ್ಧಿವಂತರು, ವಿದ್ಯಾವಂತರಾಗುತ್ತಿದ್ದಾರೆ. ಇದರ ಜೊತೆಯಲ್ಲೇ ವಿವೇಕವಂತರ ಸಂಖ್ಯೆ ಕ್ಷೀಣಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಕನ್ನಡದ ವಿದ್ವಾಂಸ ಡಾ.ಕೆ.ಅನಂತರಾಮು ವಿಷಾದಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜು ವನರಂಗದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಆಯೋಜಿಸಿದ್ದ ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾವಂತರಿಗೆ ಬುದ್ಧಿ ಹೆಚ್ಚಾದಂತೆ ವಿವೇಕ ಕಡಿಮೆಯಾಗುತ್ತಿದೆ. ಓದು ಮತ್ತು ಬುದ್ಧಿ ಬೆಳವಣಿಗೆಗೆ ತಕ್ಕಂತೆ ವಿವೇಕವನ್ನೂ ಬೆಳೆಸಿಕೊಳ್ಳಬೇಕು. ಆಗ ಸಮಾಜ ಪ್ರಗತಿಯತ್ತ ಮುನ್ನಡೆಯುತ್ತದೆ. ವಿದ್ಯಾರ್ಥಿಗಳು ವಿವೇಕ ಬೆಳೆಸಿಕೊಂಡು ಸಮರ್ಥವಾಗಿ ಸಮಾಜವನ್ನು ಕಟ್ಟಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಶತಮಾನದ ದಿನಗಳಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಯೇ ನಡೆದುಹೋಗಿದೆ. ಹೆಣ್ಣುಮಕ್ಕಳ ವಿದ್ಯಾಭಾಸದ ವಿಷಯದಲ್ಲಿ ನಾವು ಕೆಲವು ದಶಕಗಳ ಹಿಂದೆ ಸ್ವಲ್ಪ ಹಿಂದೆ ಬಿದ್ದಿದ್ದೆವು. ಈಗ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಚೈತನ್ಯ ಉಂಟಾಗಿದೆ, ವೇಗೋತ್ಕರ್ಷವಾಗುತ್ತಿದೆ ಎಂದು ನುಡಿದರು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ಈ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆಂದರೆ ಅದೇನು ಸಾಮಾನ್ಯ ವಿಷಯವಲ್ಲ. ವೈವಿಧ್ಯಮಯವಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸ್ನಾತಕ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಳ್ಳುತ್ತಿರುವುದು ಸಂತಸ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರು, ಗಾಂಧೀಜಿ, ಅಂಬೇಡ್ಕರ್ ಅವರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷವಾದ ಒತ್ತುಕೊಟ್ಟಿದ್ದಾರೆ, ಹೆಣ್ಣುಮಕ್ಕಳ ಮತ್ತು ಮಹಿಳಾ ಸಬಲೀಕರಣಕ್ಕೆ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ, ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಹೇಮಲತಾ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಕುಮಾರ ಬೆಳಲೆ, ಖಜಾಂಚಿ ಡಾ.ಜ್ಯೋತ್ಸ್ನಾಕಾರಂತ್, ಕ್ರೀಡಾ ಸಂಚಾಲಕ ಕೆ.ಆರ್.ಲೋಕೇಶ್, ಎನ್‌ಎಸ್‌ಎಸ್ ಘಟಕ-೧ ಕಾರ್ಯಕ್ರಮಾಧಿಕಾರಿ ಡಾ.ಎಂ.ಕೆಂಪಮ್ಮ, ಘಟಕ-೩ರ ಕಾರ್ಯಕ್ರಮಾಧಿಕಾರಿ ಡಾ.ಕೆ.ಲತಾ, ರೆಡ್‌ಕ್ರಾಸ್ ಸಂಚಾಲಕಿ ಡಾ.ಎಂ.ಬಿ.ಪ್ರಮೀಳಾ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಡಾ.ಎಂ.ಎಸ್.ರೇಖಾ, ವೇದಿಕೆ ಪದಾಧಿಕಾರಿಗಳಾದ ಅಧ್ಯಕ್ಷೆ ನವ್ಯಶ್ರೀ, ಉಪಾಧ್ಯಕ್ಷೆ ಬಿ.ಕೆ.ಲಾವಣ್ಯ, ಸ್ನಾತಕೋತ್ತರ ವಿಭಾಗದ ಉಪಾಧ್ಯಕ್ಷೆ ನಿಸರ್ಗ, ಕಾರ್ಯದರ್ಶಿ ಡಿ.ಎಸ್.ಮಾನ್ಯಶ್ರೀ, ಜಂಟಿ ಕಾರ್ಯದರ್ಶಿಗಳಾದ ತನುಶ್ರೀ, ತೇಜನಾ, ಪೂರ್ಣಿಮಾ, ನೂರ್‌ಆಯೇಷಾ, ಪೂಜಾ, ದಾಕ್ಷಾಯಿಣಿ, ಅಧ್ಯಾಪಕರು, ಸಿಬ್ಬಂದಿ ಇದ್ದರು.

Share this article