ತುಮಕೂರಲ್ಲಿ 20 ನವಿಲುಗಳ ಸಾವು

| N/A | Published : Aug 05 2025, 12:57 PM IST

Peacock

ಸಾರಾಂಶ

20 ನವಿಲುಗಳು ಜಮೀನೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದ ಜಮೀನೊಂದರಲ್ಲಿ ನಡೆದ್ದಿದ್ದು ಭಾನುವಾರ ಈ ಘಟನೆ ಬೆಳಕಿಗೆ ಬಂದಿದೆ.

  ಮಧುಗಿರಿ :  20 ನವಿಲುಗಳು ಜಮೀನೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದ ಜಮೀನೊಂದರಲ್ಲಿ ನಡೆದ್ದಿದ್ದು ಭಾನುವಾರ ಈ ಘಟನೆ ಬೆಳಕಿಗೆ ಬಂದಿದೆ. ಅದರಲ್ಲಿ 3 ಗಂಡು ಹಾಗೂ 17 ಹೆಣ್ಣು ನವಿಲುಗಳು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಸತ್ತು ಬಿದ್ದಿರುವ ನವಿಲುಗಳನ್ನು ಕಂಡ ಜಮೀನಿನ ಮಾಲೀಕ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳ ಪರಿಶೀಲಿಸಿದರು. ಈ ಪೈಕಿ 3 ಗಂಡು,17 ಹೆಣ್ಣು ಸೇರಿದಂತೆ ಒಟ್ಟು 20 ನವಿಲುಗಳು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಕೀಟನಾಶಕ ಸೇವಿಸಿ ನವಿಲುಗಳು ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಉದ್ದೇಶಪೂರ್ವಕವಾಗಿ ವಿಷಪ್ರಾಶನ ಮಾಡಿಸಲಾಗಿದೆಯೇ ಅಥವಾ ಬೆಳೆಗೆ ಸಿಂಪಡಿಸಿದ್ದ ಕೀಟನಾಶಕವನ್ನು ನವಿಲುಗಳು ಸೇವಿಸಿ ಸಾವನ್ನಪ್ಪಿವೆಯೇ ಎಂಬುದು ತಿಳಿದುಬಂದಿಲ್ಲ. ಘಟನೆಗೆ ಕಾರಣವೇನೆಂದು ತನಿಖೆ ನಡೆಸಿ 5 ದಿನಗಳಲ್ಲಿ ವರದಿ ಸಲ್ಲಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂಚಿಸಿದ್ದಾರೆ.

ಅರಣ್ಯಾಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಸತ್ತ ನವಿಲುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವಿಧಿ ವಿಜ್ಞಾನ ಕೇಂದ್ರದಿಂದ ವರದಿ ಬಂದ ನಂತರ ಈ 20 ನವಿಲುಗಳ ಸಾವಿಗೆ ಕಾರಣ ಏನೆಂಬುದು ತಿಳಿಯಲಿದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನವಿಲುಗಳು ಸತ್ತ ಜಮೀನಿಗೆ ಅರಣ್ಯ ಇಲಾಖೆಯ ಎಸಿಎಫ್ ಮಲ್ಲಿಕಾರ್ಜುನ್‌, ವಲಯ ಅರಣ್ಯಾಧಿಕಾರಿ ಸುರೇಶ್, ಬಿಟ್‌ ಗಾರ್ಡನ್‌ ಮಹೇಶ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜ್ ಭೇಟಿ ನೀಡಿದ್ದಾರೆ.

Read more Articles on