ಬೆಂಗಳೂರು : ರಾಜಧಾನಿಯಲ್ಲಿ ಡ್ರಗ್ಸ್ ದಂಧೆ ವಿರುದ್ಧ ಸಿಸಿಬಿ, ಕಸ್ಟಮ್ಸ್, ವೈಟ್ ಫೀಲ್ಡ್ ಪೊಲೀಸರ ಪ್ರತ್ಯೇಕ ಕಾರ್ಯಾಚರಣೆ ನಡೆಸಿ ₹24.5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಪ್ರೇಮಿಗಳು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.ಸಿಸಿಬಿ ಪೊಲೀಸರು ವಿದೇಶದಿಂದ ಅಕ್ರಮವಾಗಿ ಡ್ರಗ್ಸ್ ತಂದು ಮಾರುತ್ತಿದ್ದ ಪ್ರೇಮಿಗಳನ್ನು ಸೆರೆಹಿಡಿದು 18 ಕೋಟಿ ರು. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಕೇರಳ ಮೂಲದ ಅಶ್ವಿನ್ ಹಾಗೂ ಮುಬೀನಾ ಬಂಧಿತರಾಗಿದ್ದು, ಆರೋಪಿಗಳಿಂದ 8,335 ಎಲ್‌ಎಸ್‌ಡಿ ಸ್ಟ್ರಿಪ್ಸ್‌ಗಳು, 5 ಕೆಜಿ ಹೈಡ್ರೋ ಗಾಂಜಾ, 534 ಗ್ರಾಂ ಚರಸ್, 2 ಮೊಬೈಲ್‌ಗಳು ಹಾಗೂ ಬೈಕ್ ಸೇರಿದಂತೆ 11.50 ಕೋಟಿ ರು. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ.
ಈ ಪೆಡ್ಲರ್‌ಗಳ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿ ಸಿಸಿಬಿ-2 ಡಿಸಿಪಿ ರಾಜಾ ಇಮಾಮ್ ಕಾಸಿಂ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ದಳದ ಎಸಿಪಿ ಎಂ.ಕೆ.ಮಹಾನಂದ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಸಿ.ಎ. ಮಂಜಪ್ಪ ತಂಡ ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಥೈಲ್ಯಾಂಡ್‌ನಿಂದ ಡ್ರಗ್ಸ್:
ಬಾಗಲೂರು ಸಮೀಪದ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಲಿವಿಂಗ್ ಟು ಗೆದರ್‌ನಲ್ಲಿ ಕೇರಳದ ಮುಬೀನಾ ಹಾಗೂ ಅಶ್ವಿನ್ ನೆಲೆಸಿದ್ದು, ಆ ಫ್ಲ್ಯಾಟ್‌ನಲ್ಲೇ ಡ್ರಗ್ಸ್ ಅನ್ನು ಅಕ್ರಮವಾಗಿ ಈ ಜೋಡಿ ದಾಸ್ತಾನು ಮಾಡಿತ್ತು. ನಗರ ಹೊರವಲಯದ ಖಾಸಗಿ ಕಾಲೇಜಿನಲ್ಲಿ ಬಿಬಿಎ ಸಹಪಾಠಿಗಳಾಗಿದ್ದವರ ಮಧ್ಯೆ ಆತ್ಮೀಯ ಒಡನಾಟ ಬೆಳೆದು ಪ್ರೇಮವಾಗಿತ್ತು. ಆರು ವರ್ಷಗಳಿಂದ ಇಬ್ಬರು ಪ್ರೀತಿಯಲ್ಲಿದ್ದು, ಈ ಪ್ರೇಮದಲ್ಲೇ ಡ್ರಗ್ಸ್ ಮಾರಾಟದಲ್ಲಿ ಪರಸ್ಪರ ಕೈ ಜೋಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಬಿಎ ಓದಿಗೆ ಅರ್ಧಕ್ಕೆ ಮೊಟಕುಗೊಳಿಸಿದ ಆರೋಪಿಗಳು, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದರು. ಕೆಲ ತಿಂಗಳ ಹಿಂದೆ ಈ ಜೋಡಿಗೆ ಥೈಲ್ಯಾಂಡ್‌ನಲ್ಲಿ ನೆಲೆಸಿರುವ ಕೇರಳ ಮೂಲದ ಡ್ರಗ್ಸ್ ಪೂರೈಕೆದಾರನ ಪರಿಚಯವಾಗಿದೆ. ಥೈಲ್ಯಾಂಡ್‌ನಿಂದ ಆತನ ಮೂಲಕ ಡ್ರಗ್ಸ್ ಕಳ್ಳ ಸಾಗಾಣಿಕೆ ಮಾಡಿ ಬಳಿಕ ನಗರದಲ್ಲಿ ಅದನ್ನು ಅಶ್ವಿನಿ ಹಾಗೂ ಮುಬೀನಾ ಮಾರುತ್ತಿದ್ದರು. ವಿದೇಶದಲ್ಲಿ ನೆಲೆಸಿರುವ ಆ ಪೆಡ್ಲರ್ ಸೂಚಿಸಿದ ಸ್ಥಳಗಳಿಗೆ ತೆರಳಿ ಗ್ರಾಹಕರಿಗೆ ಹೈಡ್ರೋ ಗಾಂಜಾ ಹಾಗೂ ಎಲ್‌ಎಸ್‌ಡಿ ಸ್ಟ್ರಿಫ್ಸ್ ಅನ್ನು ಈ ಪ್ರೇಮಿಗಳು ತಲುಪಿಸುತ್ತಿದ್ದರು.
ಈ ಡ್ರಗ್ಸ್ ಖರೀದಿ ವ್ಯವಹಾರವು ಆನ್‌ಲೈನ್ ಮೂಲಕ ನಡೆದಿದ್ದು, ಆರೋಪಿಗಳ ಖಾತೆಗೆ ಲಕ್ಷ ಲಕ್ಷ ಹಣ ಜಮಾ ಆಗುತ್ತಿತ್ತು. ಈ ಜೋಡಿಗಳ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿತು. ಆಗ ಆರೋಪಿಗಳ ಬಳಿ 5 ಕೆಜಿ ಹೈಡ್ರೋ ಗಾಂಜಾ, 8 ಸಾವಿರ ಎಲ್‌ಸ್ಟ್ರೀಪ್ಸ್ ಹಾಗೂ ಅರ್ಧ ಕೆಜಿ ಚರಸ್ ಸೇರಿದಂತೆ ಕೋಟ್ಯಾಂತರ ರು ಬೆಲೆಯ ಡ್ರಗ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅಂಚೆ ಕಚೇರಿಯಲ್ಲಿ ಮತ್ತೆ ಡ್ರಗ್ಸ್
ಚಾಮರಾಜಪೇಟೆಯ ಅಂತಾರಾಷ್ಟ್ರೀಯ ಅಂಚೆ ಕಚೇರಿ ಮೇಲೆ ಸಿಸಿಬಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ 1.5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ವಿದೇಶದಿಂದ ಅಕ್ರಮವಾಗಿ ನಗರಕ್ಕೆ ಡ್ರಗ್ಸ್ ಸಾಗಾಣಿಕೆ ಬಗ್ಗೆ ಸಿಸಿಬಿ ಇನ್ಸ್‌ಪೆಕ್ಟರ್ ರಕ್ಷಿತ್ ಅವರಿಗೆ ಬಾತ್ಮೀ ಸಿಕ್ಕಿದೆ. ಈ ಸುಳಿವು ಆಧರಿಸಿ ಕೂಡಲೇ ಸಿಸಿಬಿ ದಾಳಿ ನಡೆಸಿದಾಗ 1.5 ಕೋಟಿ ರು. ಮೌಲ್ಯದ 1.5 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದೆ.
ಮೊದಲ ಬಾರಿಗೆ 8 ಸಾವಿರ ಸ್ಟ್ರಿಪ್ಸ್‌ಗಳು
ಇದೇ ಪ್ರಥಮ ಬಾರಿಗೆ ದೊಡ್ಡ ಪ್ರಮಾಣದ ಎಲ್‌ಸಿಡಿ ಸ್ಟ್ರಿಪ್ಸ್‌ಗಳು ಜಪ್ತಿಯಾಗಿವೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಇದುವರೆಗೆ 500 ರಿಂದ 800 ಎಲ್‌ಸಿಡಿ ಸ್ಟ್ರಿಪ್ಸ್‌ಗಳು ಜಪ್ತಿಯಾಗುತ್ತಿದ್ದವು. ಆದರೆ ಈ ಪ್ರೇಮಿಗಳ ಬಳಿ 8 ಸಾವಿರ ಸ್ಟ್ರಿಪ್ಸ್‌ಗಳನ್ನು ಸಿಕ್ಕಿದ್ದು, ಇದು ಡ್ರಗ್ಸ್ ದಾಳಿ ವೇಳೆ ವಶವಾದ ಇದುವರೆಗಿನ ಅತ್ಯಂತ ದೊಡ್ಡ ಪ್ರಮಾಣದ ಎಲ್‌ಸಿಡಿ ಆಗಿದೆ. ಮಾರುಕಟ್ಟೆಯಲ್ಲಿ ತಲಾ ಸ್ಟ್ರಿಫ್ಸ್ 3 ರಿಂದ 5 ಸಾವಿರ ರು. ವರೆಗೆ ಆರೋಪಿಗಳು ಮಾರುತ್ತಿದ್ದರು. ದೇವರ ಭಾವಚಿತ್ರಗಳು ಹಾಗೂ ಕಾರ್ಟೂನ್ ಚಿತ್ರಗಳಂತೆ ಎಲ್‌ಎಸ್‌ಡಿ ಸ್ಟ್ರಿಪ್ಸ್‌ಗಳನ್ನು ರೂಪಿಸಿ ಮಾರುತ್ತಿದ್ದರು ಎಂದು ಸಿಸಿಬಿ ಹೇಳಿದೆ.
ಕೆಐಎನಲ್ಲಿ ₹6 ಕೋಟಿಯ ಗಾಂಜಾ ಜಪ್ತಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಕಳ್ಳ ಮಾರ್ಗದಲ್ಲಿ ನಗರಕ್ಕೆ ಸಾಗಾಣಿಕೆಯಾಗುತ್ತಿದ್ದ 6 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಮೂವರು ಬ್ಯಾಂಕಾಕ್ ಪ್ರಯಾಣಿಕರು ಪ್ರತ್ಯೇಕವಾಗಿ ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ. ಕೆಐಎಗೆ ಭಾನುವಾರದ ಬಂದಿಳಿದವನ ಬಳಿ 5.17 ಕೋಟಿ ರು. ಮೌಲ್ಯದ 14.79 ಕೆಜಿ, ಸೋಮವಾರ ಆಗಮಿಸಿದ ಪೆಡ್ಲರ್‌ನಿಂದ 33.25 ಲಕ್ಷ ರು. ಮೌಲ್ಯದ 950 ಗ್ರಾಂ ಹಾಗೂ ಮಂಗಳವಾರ ಬಂದಿಳಿದ ಪೆಡ್ಲರ್ ಬಳಿ 32.20 ಲಕ್ಷ ರು ಮೌಲ್ಯದ 920 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೆಂಟರ್ ಬಳಿ ₹ 50 ಲಕ್ಷ ಬೆಲೆಯ ಗಾಂಜಾ
ವೈಟ್‌ಫೀಲ್ಡ್ ಪೊಲೀಸರ ಗಾಳಕ್ಕೆ ಮತ್ತೊಬ್ಬ ಪೆಡ್ಲರ್ ಬಿದ್ದಿದ್ದು, ಆತನಿಂದ 55 ಲಕ್ಷ ರು. ಮೌಲ್ಯದ 27.2 ಕೆಜಿ ಗಾಂಜಾ, 3.2 ಕೆಜಿ ಹ್ಯಾಶಿಸ್ ಆಯಿಲ್ ಜಪ್ತಿಯಾಗಿದೆ. ಒಡಿಶಾ ಮೂಲದ ಲಿಂಗರಾಜ್ ದಾಸ್ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ನಾಗೊಂಡನಹಳ್ಳಿಯ ಶಿವಕುಂಟಮ್ಮ ದೇವಾಲಯದ ಬಳಿ ವಾಹನ ತಪಾಸಾಣೆ ವೇಳೆ ಆತ ಸಿಕ್ಕಿಬಿದ್ದಿದ್ದಾನೆ. ತನ್ನೂರಿನಿಂದ ಅಕ್ರಮವಾಗಿ ಗಾಂಜಾ ತಂದು ನಗರದಲ್ಲಿ ದಾಸ್ ಮಾರುತ್ತಿದ್ದ. ವಾಹನ ತಪಾಸಣೆ ವೇಳೆ ಪೊಲೀಸರನ್ನು ಕಂಡು ದಾಸ್ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಶಂಕೆ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಗಾಂಜಾ ದಂಧೆ ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ದಾಸ್, ಪೆಂಟರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ದಣಿವಿಲ್ಲದೆ ಹಣ ಸಂಪಾದನೆಗೆ ಆತ ದುರಾಸೆಪಟ್ಟು ಈಗ ಜೈಲು ಸೇರಿದ್ದಾನೆ. ಒಡಿಶಾದಲ್ಲಿ ಕಡಿಮೆ ಬೆಲೆಗೆ ಸಿಗುವ ಗಾಂಜಾವನ್ನು ರೈಲಿನಲ್ಲಿ ಅಕ್ರಮವಾಗಿ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದ. ಇನ್ಸ್‌ಪೆಕ್ಟರ್ ಗುರುಪ್ರಸಾದ್ ಹಾಗೂ ಪಿಎಸ್ಐ ಗಿರೀಸ್ ನಾಯಕ್ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರಕ್ಕೆ ವಿದೇಶದಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪತ್ತೆ ಹಚ್ಚುವಲ್ಲಿ ಯಶಸ್ಸು ಕಂಡಿದೆ. ಡ್ರಗ್ಸ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಲಾಗುತ್ತದೆ.
-ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ
