ನಗರದ ವಿವಿಧೆಡೆ ವಶಪಡಿಸಿಕೊಳ್ಳಲಾದ ಡ್ರಗ್ಸನ್ನು ಪೊಲೀಸ್‌ ಆಯುಕ್ತರು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ 16 ಮಂದಿಯನ್ನು ಪ್ರತ್ಯೇಕವಾಗಿ ಸೆರೆ ಹಿಡಿದು ಐದು ಕೋಟಿ ರು. ಮೌಲ್ಯದ ಡ್ರಗ್ಸ್‌ ಅನ್ನು ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಜಪ್ತಿ ಮಾಡಿದ್ದಾರೆ.

ಸಿಸಿಬಿ, ವಿದ್ಯಾರಣ್ಯಪುರ, ನಂದಿನಿಲೇಔಟ್‌, ಮಹದೇವಪುರ, ಗೋವಿಂದಪುರ, ಮಾರತ್ತಹಳ್ಳಿ. ಚಾಮರಾಜಪೇಟೆ ಹಾಗೂ ಸಂಪಂಗಿರಾಮನಗರ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 48.750 ಕೆಜಿ ಗಾಂಜಾ, 306 ಗ್ರಾಂ ಹೈಡ್ರೋ ಗಾಂಜಾ, 230 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌ ಹಾಗೂ 1.939 ಕೆಜಿ ಎಂಡಿಎಂಎ ಮಾತ್ರೆಗಳು ಸೇರಿ ಒಟ್ಟು 5.24 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಹೊರ ರಾಜ್ಯ ಹಾಗೂ ವಿದೇಶಿಯರ ಪತ್ತೆಗೆ ತನಿಖೆ ಮುಂದುವರಿದಿದೆ. ಹಲವು ದಿನಗಳಿಂದ ಆರೋಪಿಗಳು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ವಿದೇಶಿ ಪ್ರಜೆ ಪ್ರೇಯಸಿ ಬಳಿ 2 ಕೋಟಿ ಡ್ರಗ್ಸ್:

ನೈಜೀರಿಯಾ ಪೆಡ್ಲರ್ ಪ್ರೇಯಸಿ ಬಳಿ 2 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಮಾರಸಂದ್ರ ಮಂಡೂರು ಸಮೀಪ ಪುಟ್ಟಣ್ಣ ಲೇಔಟ್‌ನ ಎನ್.ಕೆ.ಸುಭಾಷಿಣಿ ಬಂಧಿತಳಾಗಿದ್ದು, ಆಕೆಯಿಂದ 2 ಕೋಟಿ ರು. ಬೆಲೆಯ 1.939 ಕೆಜಿ ಎಡಿಎಂಎ ವಶಪಡಿಸಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ನೈಜೀರಿಯಾ ಮೂಲದ ಪೆಡ್ಲರ್‌ನನ್ನು ಆಕೆ ಪ್ರೀತಿಸುತ್ತಿದ್ದು, ತನ್ನ ಪ್ರಿಯಕರನ ಸೂಚನೆ ಮೇರೆಗೆ ಡ್ರಗ್ಸ್ ಮಾರಾಟದಲ್ಲಿ ಆಕೆ ತೊಡಗಿದ್ದಳು ಎಂದು ಮೂಲಗಳು ಹೇಳಿವೆ.

2018ರಲ್ಲಿ ಡ್ರಗ್ಸ್ ಕೇಸ್‌ನಲ್ಲಿ ಆಕೆಯನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ಆಕೆ ಮತ್ತೆ ತನ್ನ ದಂಧೆ ಮುಂದುವರೆಸಿದ್ದಳು.ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಆತನ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಸಿಸಿಬಿಯ ಮತ್ತೊಂದು ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಮೊಹಮ್ಮದ್‌ ಸಿನಾನ್‌ ಹಾಗೂ ಸಿದ್ದಿಕಿ ಬಲೆಗೆ ಬಿದ್ದಿದ್ದು, ಆರೋಪಿಗಳಿಂದ 24 ಲಕ್ಷ ರು ಮೌಲ್ಯದ ಎಂಡಿಎಂಎ ಜಪ್ತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಿಳೆಯರ ಮೂಲಕ ದಂಧೆ

ಗಾಜಾ ಮಾರಾಟ ದಂಧೆ ನಡೆಸುತ್ತಿದ್ದ ಪೆಡ್ಲರ್‌ವೊಬ್ಬಳು ಅಮೃತಹಳ್ಳಿ ಠಾಣೆ ಪೊಲೀಸರಿಗೆ ಸೆರೆಯಾಗಿದ್ದಾಳೆ.

ಜಾನಕಿ ಬಂಧಿತಳಾಗಿದ್ದು, ಆಕೆಯಿಂದ 12 ಲಕ್ಷ ರು. ಮೌಲ್ಯದ 12.800 ಕೆಜಿ ಗಾಂಜಾ ಜಪ್ತಿಯಾಗಿದೆ. ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಆಕೆಯ ಕೇರಳ ಮೂಲದ ಪ್ರಿಯಕರನ ಪತ್ತೆಗೆ ತನಿಖೆ ನಡೆದಿದೆ. ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಮಹಿಳೆಯರ ಮೂಲಕವೇ ಈ ಜೋಡಿ ದಂಧೆ ನಡೆಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.