ಸಾರಾಂಶ
ಕಳೆದ ತಿಂಗಳು ಸಂಗ್ರಹಿಸಲಾಗಿದ್ದ 175 ಹಾಲಿನ ಮಾದರಿಗಳ ಪೈಕಿ 73 ಮಾದರಿಗಳ ವರದಿ ಬಂದಿದ್ದು, ಈ ಪೈಕಿ ನಾಲ್ಕು ಮಾದರಿಗಳ ಗುಣಮಟ್ಟ ಕಡಿಮೆ ಎಂಬುದಾಗಿ ಉಲ್ಲೇಖ
ಬೆಂಗಳೂರು : ಕಳೆದ ತಿಂಗಳು ಸಂಗ್ರಹಿಸಲಾಗಿದ್ದ 175 ಹಾಲಿನ ಮಾದರಿಗಳ ಪೈಕಿ 73 ಮಾದರಿಗಳ ವರದಿ ಬಂದಿದ್ದು, ಈ ಪೈಕಿ ನಾಲ್ಕು ಮಾದರಿಗಳ ಗುಣಮಟ್ಟ ಕಡಿಮೆ ಎಂಬುದಾಗಿ ಉಲ್ಲೇಖವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯ ಪ್ರಗತಿಯಲ್ಲಿದೆ. ಅಂತೆಯೇ ಇನ್ನೂ ಹೆಚ್ಚಿನ ಹಾಲಿನ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಗಾಗಿ ಈ ತಿಂಗಳಲ್ಲಿ ಕೆಎಂಎಫ್ ಜತೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಜುಲೈನಲ್ಲಿ 3,489 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಈ ಪೈಕಿ 17 ಮಾದರಿಗಳು ಅಸುರಕ್ಷಿತ ಮತ್ತು 18 ಮಾದರಿಗಳು ಕಡಿಮೆ ಗುಣಮಟ್ಟ ಎಂದು ವರದಿಯಾಗಿದೆ. ಅಂತೆಯೇ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಕುರಿತು ರಾಜ್ಯದ 1,557 ಬೀದಿ ಬದಿ ವ್ಯಾಪಾರ ಘಟಕಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ಪೈಕಿ ಲೋಪ ಕಂಡು ಬಂದ 406 ಘಟಕಗಳಿಗೆ ನೋಟಿಸ್ ಜಾರಿಗೊಳಿಸಿ, 44 ಸಾವಿರ ರು. ದಂಡ ವಿಧಿಸಲಾಗಿದೆ ಎಂದರು.
99 ಆಹಾರ ಮಾದರಿ ಸಂಗ್ರಹ:
ರಾಜ್ಯದಲ್ಲಿ 186 ಬಸ್ ನಿಲ್ದಾಣಗಳಲ್ಲಿನ 889 ಆಹಾರ ಮಳಿಗೆಗಳನ್ನು ತಪಾಸಣೆ ನಡೆಸಲಾಗಿದೆ. ಈ ಪೈಕಿ ಲೋಪ ಕಂಡ ಬಂದ 206 ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಿ, 55 ಸಾವಿರ ರು. ದಂಡ ವಿಧಿಸಲಾಗಿದೆ. ಅಂತೆಯೆ 99 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ನೀರಿಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.
ಅಂತೆಯೇ ರಾಜ್ಯದ 603 ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಿದ್ದು, 545 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.