ಬೀರೂರು: ಶಿಕ್ಷಕರ ದಿನಾಚರಣೆಗೆ ಗುರು ಎನ್ನುವ ಪದಕ್ಕೆ ಅನ್ವರ್ಥಕ ನಾಮ ನೀಡಿದವರು ಡಾ.ಸರ್ವಪಲ್ಲಿ ರಾಧಕೃ಼ಷ್ಣನ್ ಎಂದು ಕರ್ನಾಟಕ ಅಗ್ನಿಶಾಮಕದಳ ಡಿಐಜಿಪಿ ರವಿ ಡಿ.ಚನ್ನಣ್ಣನವರ್ ಅಭಿಪ್ರಾಯಪಟ್ಟರು.
ಶಿಕ್ಷಕರು ಭವಿಷ್ಯದ ಭಾರತ ನಿರ್ಮಾಣ ಮಾಡುವ ಕಾರ್ಖಾನೆಗಳಾಗಬೇಕು. ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎನ್ನುವ ಆಲೋಚನೆ ಹೊಂದಿದ ವ್ಯಕ್ತಿಗಳ ಅನಿರ್ವಾತೆ ಇದ್ದು, ಅಂತಹ ವ್ಯಕ್ತಿಗಳನ್ನು ಉತ್ತಮ ಸಮಾಜಕ್ಕೆ ನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಕಲಿತು, ಸಾಧಿಸಿದ ವಿದ್ಯೆಯನ್ನು ಮತ್ತೊಬ್ಬರಿಗೆ ಧಾರೆಯೆರೆಯುವುದು ಪುಣ್ಯದ ಕೆಲಸ. ವೇದ ಪುರಾಣದ ಕಾಲದಿಂದಲೂ ಭಾರತದಲ್ಲಿ ಗುರುವಿಗೆ ಪರಮೋನ್ನತ ಸ್ಥಾನವನ್ನು ನೀಡಲಾಗಿದೆ ಎಂದು ತಿಳಿಸಿದರು.ಸಂಸ್ಕೃತಿ, ಪರಂಪರೆ ಮತ್ತು ದೇಶವನ್ನು ಕಟ್ಟುವಲ್ಲಿ ಗುರುವಿನ ಪಾತ್ರ ಪ್ರಮುಖವಾದುದು. ಪ್ರಜೆಗಳಲ್ಲಿ ಸತ್ ಚಾರಿತ್ರ್ಯವನ್ನು ಉಂಟುಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಅಪೂರ್ವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಬಿಇಒ ಚೋಪ್ದಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎನ್.ಶೇಖರಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಬೀರೂರು ಶೈಕ್ಷಣಿಕ ವಲಯದ ಅಧ್ಯಕ್ಷ ಬಸಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಟಿ.ಅಶೋಕ್, ಜಿಲ್ಲಾ ಉಪಾಧ್ಯಕ್ಷ ಬಿ.ಜೆ.ಜಗದೀಶ್, ಪುರಸಭಾ ಮಾಜಿ ಅಧ್ಯಕ್ಷೆ ವನಿತಮಧು, ಸದಸ್ಯರಾದ ಮಾನಿಕ್ ಭಾಷ, ಶಿಕ್ಷಕರ ಸಂಘದ ನಾಗರಾಜ್, ಹಿದಾಯತ್ ಉಲ್ಲಾ, ಮಾದಯ್ಯ, ಯಮುನಾ ಮೋಹನ್, ವಿ.ಗೀತಾ, ಎನ್.ಮಹೇಶ್, ಮೈಲಾರಪ್ಪ, ಮೋಹನ್ ರಾಜ್, ಕವಿತಾ ಹೆಚ್ಚ, ಬಿ.ಆರ್.ಗಂಗಪ್ಪ, ಸೇರಿದಂತೆ ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು ಮತ್ತು ವಲಯದ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು.
ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳಲಿಪ್ರತಿಯೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ವಾರ್ಷಿಕ ಪ್ರತಿ ಮಗುವಿಗೆ 77 ಸಾವಿರ ರು. ಖರ್ಚು ಮಾಡಿ ಓದಿಸುತ್ತಿದೆ. ಆದರೆ ಇಂಗ್ಲಿಷ್ ವ್ಯಾಮೋಹಕ್ಕೆ ಒಳಪಟ್ಟು ಪೋಷಕರು ಸ್ವಂತ ಕೈಯಿಂದ 30 ಸಾವಿರ ರು. ಶಾಲಾ ಶುಲ್ಕ ಕಟ್ಟಿ ಖಾಸಗಿ ಶಾಲೆಗೆ ಕಳಿಸುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಶಾಸಕ ಕೆ.ಎಸ್.ಆನಂದ್ ಬೇಸರ ವ್ಯಕ್ತಪಡಿಸಿದರು.
ಯಾವುದೇ ಒಬ್ಬ ಉನ್ನತ ಹುದ್ದೆಯಲ್ಲಿರುವವರ ಹಿಂದಿನ ವಿದ್ಯಾರ್ಜನೆ ಗಮನಿಸಿದರೆ ಅದು ಸರ್ಕಾರಿ ಶಾಲೆ ನೀಡಿದ್ದಾಗಿರುತ್ತದೆ. ಮತ್ತೆ ಮುಚ್ಚುವ ಸರ್ಕಾರಿ ಶಾಲೆಗಳನ್ನು ಮುಂದುವರಿಸಲು ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.