ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಪಂಚದಲ್ಲಿ ೧೨೦ ಕೋಟಿಗೂ ಹೆಚ್ಚು ಹಿಂದೂಗಳ ಜನಸಂಖ್ಯೆ ಇದ್ದರೂ ಸಹ ಧರ್ಮದ ಕಾಲಮ್ನಲ್ಲಿ ಬ್ರಾಹ್ಮಣ, ಲಿಂಗಾಯತ, ಹೊಲೆಯ, ಮಾದಿಗ, ಮತ್ತಿತರೆ ಜಾತಿ, ಉಪಜಾತಿ, ಮತ, ಪಂಗಡಗಳನ್ನು ಬರೆಸುತ್ತಾ ಹೋಗುತ್ತಿದ್ದು, ನಾವೆಲ್ಲ ಹಿಂದೂ- ನಾವೆಲ್ಲ ಒಂದು ಎಂದು ಯಾವಾಗ ಭಾವಿಸುತ್ತೇವೆಯೋ ಆವಾಗ ಮಾತ್ರ ಹಿಂದೂ ಧರ್ಮ ಅಭಿವೃದ್ಧಿ ಕಾಣಲು ಸಾಧ್ಯವೆಂದು ಬೆಂಗಳೂರಿನ ಯುವವಾಗ್ಮಿ, ಲೇಖಕಿ ಕುಮಾರಿ ಹಾರಿಕಾ ಮಂಜುನಾಥ್ ತಿಳಿಸಿದರು.ಅವರು ವಿಜಯಪುರ ಪಟ್ಟಣದ ಗಾಂಧಿ ಚೌಕದಲ್ಲಿ ಶ್ರೀ ವಿನಾಯಕ ಭಕ್ತ ಮಂಡಳಿ ವತಿಯಿಂದ ಏರ್ಪಡಿಸಲಾಗಿದ್ದ ೯೦ನೇ ವರ್ಷದ ವಿನಾಯಕ ವಾರ್ಷಿಕೋತ್ಸವದ ಸಂದರ್ಭದಲ್ಲಿ
ವನಜ ಪುಟ್ಟಣ್ಣ ವೇದಿಕೆಯಲ್ಲಿ ವಿಶೇಷ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.ದೇಶದ ಸ್ವಾತಂತ್ರ್ಯಕ್ಕಾಗಿ ಈ ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ ಮುಂತಾದವರು ೧೩೩ ವರ್ಷಗಳ ಹಿಂದೆ ಹುಟ್ಟು ಹಾಕಿದ್ದು, ಭಗತ್ ಸಿಂಗ್, ಸುಖದೇವ್, ರಾಜಗುರು, ಸಾವರ್ಕರ್, ಚಂದ್ರಶೇಖರ್ ಆಜಾದ್ ಮೊದಲಾದ ಹಲವಾರು ಕ್ರಾಂತಿಕಾರಿಗಳನ್ನು ಹುಟ್ಟು ಹಾಕಲು ಗಣೇಶೋತ್ಸವದಿಂದ ಸಾಧ್ಯವಾಯಿತು ಎಂದು ತಿಳಿಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಚ.ವಿಜಯ ಬಾಬುರವರು ಮಾತನಾಡಿ, ಅಂದು ಸ್ವಾತಂತ್ರ್ಯ ಪಡೆಯಲು ಹುಟ್ಟು ಹಾಕಿದ ಗಣೇಶೋತ್ಸವ ಇಂದಿಗೂ ಪ್ರಸ್ತುತವಾಗಿದ್ದು, ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ ಗಣೇಶೋತ್ಸವವನ್ನು ಆಚರಿಸಬೇಕಾಗಿದೆ ಎಂದು ತಿಳಿಸಿದರು.ಪುರಸಭಾ ಸದಸ್ಯರಾದ ಶಿಲ್ಪಾ ಅಜಿತ್, ರೋಟರಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಬಿ. ಸಿ. ಸಿದ್ದರಾಜು, ಇನ್ನರ್ವಿಲ್ ಮಾಜಿ ಅಧ್ಯಕ್ಷೆ ದೀಪಾ ಮುರಳೀಧರ್, ನಿವೃತ್ತ ಪೌರಾಯುಕ್ತರಾದ ವಿ. ಶಿವಕುಮಾರ್, ಬಸವೇಶ್ವರ ಪ್ರಿಂಟರ್ಸ್ ಪ್ರಭಾಕರ್, ಮಹಾಂತಿನ ಮಠದ ಕಾರ್ಯದರ್ಶಿ ವಿಶ್ವನಾಥ್, ನಿರ್ದೇಶಕರಾದ ವಿಜಯ್ ಕುಮಾರ್, ಜೆಆರ್ಪಿ ಮುರಳೀಧರ್, ಗ್ಯಾಸ್ ರಾಜು, ಅಜಿತ್ ಕುಮಾರ್ , ಶಿವಪ್ರಸಾದ್, ಪ್ರವೀಣ್, ಸುರೇಶ ಬಾಬು ,ಬಸವರಾಜು ಉಪಸ್ಥಿತರಿದ್ದರು.