ನರಸಿಂಹರಾಜಪುರ: ರೈತರು ಕನಿಷ್ಠ 2 ವರ್ಷಗಳಿಗೊಮ್ಮೆ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ ಕೊರತೆಯಲ್ಲಿರುವ ಪೋಷಕಾಂಶಗಳು ನೀಡಿದರೆ ರೋಗಬಾಧೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಿ.ಎಂ.ಪ್ರಶಾಂತ್ ಸಲಹೆ ನೀಡಿದರು.ಮಂಗಳವಾರ ತಾಲೂಕಿನ ಅಡಕೆಯಲ್ಲಿ ಕೊಳೆ ರೋಗದಿಂದ ಹಾನಿಯಾಗಿರುವ ಸಮಸ್ಯಾತ್ಮಕ ತೋಟಗಳಿಗೆ ಶಿವಮೊಗ್ಗ ಮತ್ತು ಮೂಡಿಗೆರೆ ವಿಜ್ಞಾನಿಗಳ ತಂಡ ಭೇಟಿ ನೀಡಿ ನಂತರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾಹಿತಿ ನೀಡಿದರು.ನಮ್ಮ ತಂಡದವರು ತೋಟಗಳಿಗೆ ಭೇಟಿ ನೀಡಿದಾಗ ರೈತರು ಮಣ್ಣು ಪರೀಕ್ಷೆ ಮಾಡಿಸದಿರುವುದು ಕಂಡು ಬಂದಿದೆ. ಲಘು ಪೋಷಕಾಂಶಗಳನ್ನು ಕಡಿಮೆ ಬಳಸುತ್ತಿರುವುದರಿಂದ ಮಣ್ಣಿನಲ್ಲಿ ಪಿಎಚ್ ಅಂಶ ಕಡಿಮೆಯಾಗಿದೆ. ಇಂಗಾಲ, ರಂಜಕ, ಸತು, ಬೋರಾನ್, ಸುಣ್ಣ ಮತ್ತಿತರ ಲಘು ಪೋಷಕಾಂಶಗಳನ್ನು ಬಳಸಬೇಕು. ಮಣ್ಣು ಪರೀಕ್ಷೆಗೆ ವೈಜ್ಞಾನಿಕವಾಗಿ ಮಣ್ಣಿನ ಮಾದರಿ ಸಂಗ್ರಹಿಸಬೇಕು ಎಂದು ತಿಳಿಸಿದರು.
ಮಣ್ಣು ಮಾದರಿ ಸಂಗ್ರಹಿಸುವ ಬಗ್ಗೆ ಕೃಷಿ ಸಖಿಯರಿಗೆ ತರಬೇತಿಯನ್ನು ಸಹ ನೀಡಲಾಗಿದೆ. ಬದುವಿನ ಸುತ್ತ ಹರಿವಿನಲ್ಲಿನ ಮಣ್ಣನ್ನು ಪರೀಕ್ಷೆಗೆ ತೆಗೆದುಕೊಳ್ಳಬಾರದು. ಒಂದು ಜಮೀನಿನಲ್ಲಿ 6 ರಿಂದ 8 ಕಡೆ ಝಡ್ ಆಕಾರದಲ್ಲಿ ಮಣ್ಣು ತೆಗೆಯಬೇಕು. 4 ಅಡಕೆ ಗಿಡದ ಮಧ್ಯದಲ್ಲಿ 1 ಅಡಿ ಗುಂಡಿಯನ್ನು ಯು ಆಕಾರದಲ್ಲಿ ಗುಂಡಿ ತೆಗೆದು ಮಣ್ಣು ಹೊರಹಾಕಿದ ನಂತರ 2 ಇಂಚು ಮಣ್ಣನ್ನು ಮೇಲಿನಿಂದ ಕೆಳಗೆ ತೆಗೆಯಬೇಕು. 2 ದಿನ ಮಣ್ಣನ್ನು ನೆರಳಿನಲ್ಲಿ ಒಣಗಿಸಿ ಜರಡಿ ಮಾಡಿ ಕವರ್‌ನಲ್ಲಿ ಹಾಕಿ ಯಾವ ಬೆಳೆ ಬೆಳೆಯಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಬರೆದು ಮಣ್ಣು ಪರೀಕ್ಷೆಗೆ ಕಳಿಸಿಕೊಡಬೇಕು. ಮಣ್ಣಿನಲ್ಲಿ ಪೋಷಕಾಂಶದ ಕೊರತೆ ಕಂಡು ಬಂದಲ್ಲಿ ಸಾರಜನಕ, ಪೋಟ್ಯಾಷ್, ರಂಜಕ, ಸುಣ್ಣ, ಜಿಂಕ್ ಇವುಗಳನ್ನು 25 ರಿಂದ 30 ಗ್ರಾಂ ಎರಡು ವರ್ಷಕ್ಕೊಮ್ಮೆ ಹಾಕಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುಚಿತ್ರಕುಮಾರಿ ಮಾಹಿತಿ ನೀಡಿ, ಈ ಭಾಗದ ಅಡಕೆ ತೋಟಗಳಲ್ಲಿ ಕೊಳೆರೋಗ, ಹಿಡಿಮುಂಡಿಗೆರೋಗ, ಬೇರು ಹುಳುರೋಗ. ಎಲೆಚುಕ್ಕಿ ರೋಗದ ಸಮಸ್ಯೆಗಳು ಕಂಡು ಬಂದಿವೆ ಎಂದರು.ವಾತಾವರಣದಲ್ಲಿ ವ್ಯತ್ಯಾಸಗಳಾಗುವುದರಿಂದ ಹಾಗೂ ಆಹಾರ ಸರಪಣಿಯಲ್ಲಿ ವ್ಯತ್ಯಾಸವಾಗಬಾರದೆಂಬುದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕೀಟನಾಶಕ, ರಾಸಾಯನಿಕಗಳನ್ನು ಹಾಕುವುದರಿಂದ ಶೇಕಡ 50ರಷ್ಟು ಮಾತ್ರ ರೋಗಬಾಧೆಯನ್ನು ತಡೆಗಟ್ಟುತ್ತದೆ. ಹಿಡಿ ಮುಂಡಿಗೆ, ಕೊಳೆರೋಗ ನಿರ್ವಹಣೆಗೆ ಮಣ್ಣಿನಲ್ಲಿರುವ ನ್ಯೂಟ್ರಿಷಿಯನ್ (ಪೋಷಕಾಂಶ)ಗಳನ್ನು ತಿಳಿದುಕೊಳ್ಳಬೇಕು. ಮಣ್ಣಿನಲ್ಲಿ ಕೊರತೆಯಿರುವ ಪೋಷಕಾಂಶಗಳನ್ನು ತಿಳಿದು ಕೊಟ್ಟಾಗ ಗಿಡಕ್ಕೆ, ಮರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ. ಮಳೆ ಹೆಚ್ಚಾಗಿ ಬರುವುದರಿಂದ ಕೊಳೆರೋಗ ಪ್ರತಿವರ್ಷ ಬರುತ್ತದೆ. ಅಡಕೆಗೆ ಬಾಧಿಸುವ ಕೆಂಪು ತಿಗಣೆ, ಬಿಳಿನೋಣ, ಬೇರುಹುಳು ರೋಗದ ಬಗ್ಗೆ ಹಾಗೂ ಅವುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಶಿವಮೊಗ್ಗದ ನವಿಲೆ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಸ್ಯರೋಗ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಶೈಲ್ ಸೋನ್ಯಾಲ್ ಅವರು ಅಡಕೆಗೆ ತಗಲುವ ಕೊಳೆರೋಗ, ಹಿಡಿಮುಂಡಿಗೆ ರೋಗ ನಿಯಂತ್ರಣ, ಬ್ರೋಡೊ ಸಿಂಪರಣೆ, ಹಿಂಗಾರು ಉದುರುವುದನ್ನು ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಶಿವಮೊಗ್ಗ ನವಿಲೆ ತೋಟಗಾರಿಕಾ ಸಂಶೋಧನಾ ಕೇಂದ್ರದ ತೋಟಗಾರಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಕಿರಣ್ ಕುಮಾರ್, ಸಹಾಯಕ ತೋಟಗಾರಿಕಾ ನಿರ್ದೇಶಕ ರೋಹಿತ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಬಸವರಾಜಪ್ಪ, ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜಪ್ಪಗೌಡ, ನಿರ್ದೇಶಕ ವೈ.ಎಸ್.ಸುಬ್ರಹ್ಮಣ್ಯ ಮತ್ತಿತರರಿದ್ದರು. ವಿಜ್ಞಾನಿಗಳು ದ್ವಾರಮಕ್ಕಿಯ ದಿವಾಕರ್, ವೆಂಕಟೇಶ್, ಆಲಂದೂರಿನ ಅಂಬರೀಷ್, ಸತೀಶ್, ಚೇತನ, ರಾಮಚಂದ್ರ, ಕುಣಜದ ಪಿ.ಕೆ.ಬಸವರಾಜಪ್ಪ, ಕಾನೂರು ಬಿ.ಕೆ.ನಾರಾಯಣಸ್ವಾಮಿ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.