ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಶಾಸಕರ ಅನುದಾನದ ಜೊತೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿಯ ವಾಬಸಂದ್ರ ಹಾಗೂ ಲಕ್ಕೊಂಡಹಳ್ಳಿ ಗ್ರಾಮಗಳಲ್ಲಿ ಸುಮಾರು ೮೦ ಲಕ್ಷ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಂಚ ಗ್ಯಾರಂಟಿಗಳ ಅನುಷ್ಠಾನದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಕೊಟ್ಟ ಆಶ್ವಾಸನೆಯಂತೆ ೫ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುತ್ತಿದ್ದು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸಲು ಅನುದಾನ ನೀಡುತ್ತಿದೆ. ಪ್ರಮುಖವಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನವನ್ನು ಶಾಸಕರಿಗೆ ನೀಡುತ್ತಿದ್ದು, ಅಗತ್ಯವಾದ ಚರಂಡಿ, ಸಿಸಿ ರಸ್ತೆ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.ಹೊಸಕೋಟೆ ನಗರದಲ್ಲಿ ನೂರು ಕೋಟಿ ರು. ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಕೆ ಮಾಡುವ ಕಾಮಗಾರಿ ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿ ಸಹ ಪೂರ್ಣಗೊಳ್ಳಲಿದ್ದು, ಗುಣಮಟ್ಟದ ವಿದ್ಯುತ್ ಸರಬರಾಜು ನಗರದ ನಾಗರಿಕರಿಗೆ ಲಭ್ಯವಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಮಂಜುನಾಥ್ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡ ಮಾರ್ಗದರ್ಶನದಲ್ಲಿ ಶಾಸಕರ ಅನುದಾನದ ಜೊತೆಗೆ ಗ್ರಾಪಂ ವ್ಯಾಪ್ತಿಯ ಅನುದಾನ ಸದ್ಬಳಕೆ ಮಾಡಿಕೊಂಡು ಜನರ ಭೇಡಿಕೆಗನುಗುಣವಾಗಿ ಅನುದಾನ ಒದಗಿಸಿ ಗ್ರಾಮಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಲಕ್ಕೊಂಡಹಳ್ಳಿ ಗ್ರಾಮದಲ್ಲಿ ೨೫ ಲಕ್ಷ ರು. ವಾಬಸಂದ್ರ ಗ್ರಾಮದಲ್ಲಿ ೫೫ ಲಕ್ಷ ರು. ಅನುದಾನವನ್ನು ಶಾಸಕರು ಒದಗಿಸಿದ್ದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು.ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಲಕ್ಕೊಂಡಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಎಂ.ಮಂಜುನಾಥ್, ಮುಖಂಡರಾದ ನಾರಾಯಣಗೌಡ, ನಾರಾಯಣಸ್ವಾಮಿ, ಆನಂದಪ್ಪ, ಹೇಮಂತ್, ಸುದರ್ಶನ್ ಮುನಿಯಪ್ಪ ಸೇರಿ ಹಲವರು ಹಾಜರಿದ್ದರು.