ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ಸಮಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇತ್ತು. ಐದು ನಿಮಿಷಗಳೊಳಗೆ ಪೊಲೀಸರು ಎಚ್ಚೆತ್ತು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈಗ ಮದ್ದೂರಿನಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ತಿಳಿಸಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಭಾನುವಾರ ಸಂಜೆ ೭ ಗಂಟೆ ಸಮಯದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುವಾಗ ಕಲ್ಲು ತೂರಾಟ ನಡೆದಿದೆ. ಈ ಸಮಯದಲ್ಲಿ ಮೆರವಣಿಗೆ ನಡೆಸುತ್ತಿದ್ದವರು ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಮಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇತ್ತು. ಐದು ನಿಮಿಷದೊಳಗಾಗಿ ಪೊಲೀಸರು ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಪೊಲೀಸರ ಕಾರ್ಯವನ್ನು ಪ್ರಶಂಸಿಸಿದರು.
ಗಣೇಶನ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಸೋಮವಾರ ಹಿಂದೂಪರ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಿವೆ. ಸದ್ಯ ಮದ್ದೂರು ಶಾಂತಿಯುತವಾಗಿದೆ. ಇಡೀ ಪಟ್ಟಣವನ್ನು ಪೊಲೀಸರು ಹತೋಟಿಗೆ ತೆಗೆದುಕೊಂಡಿದ್ದಾರೆ. ೭ ಎಸ್ಪಿ, ೩ ಎಎಸ್ಪಿ, ೧೦ ಡಿವೈಎಸ್ಪಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹಿಂದೂ ಸಂಘಟನೆಗಳು ಮಂಗಳವಾರ ಬಂದ್ ಕರೆ ಕೊಟ್ಟಿದ್ದರಿಂದ ಅದೇ ಬಂದೋಬಸ್ತ್‌ನ್ನು ಮುಂದುವರೆಸಲಾಗಿದೆ ಎಂದರು.ಸೋಮವಾರ ಪ್ರತಿಭಟನೆ ವೇಳೆ ಡ್ರೋಣ್ ಕೂಡ ಬಳಕೆ ಮಾಡಿದ್ದೆವು. ರಾತ್ರಿ ವೇಳೆ ಅಹಿಕರ ಘಟನೆಗಳು ನಡೆಯದಂತೆ ವಿಶೇಷವಾಗಿ ಪೊಲೀಸರ ನಿಯೋಜನೆ ಮಾಡಿದ್ದೇವೆ. ನಾಳೆಯ ಸಾಮೂಹಿಕ ಗಣೇಶ ವಿಸರ್ಜನೆಗೆ ಕೂಡ ವಿಶೇಷ ಬಂದೋಬಸ್ತ್ ಮಾಡಿದ್ದೇವೆ. ಬುಧವಾರ ಬೆಳಗ್ಗೆವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ. ಲಿಕ್ಕರ್ ನಿಷೇಧವೂ ಮುಂದುವರೆಯಲಿದೆ ಎಂದರು.
ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ೨೨ ಜನ ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನು ಹಲವರನ್ನ ಬಂಧಿಸಬೇಕಿದೆ. ಸಿಸಿ ಕ್ಯಾಮೆರಾಗಳಲ್ಲಿ ಕಲ್ಲು ಬಿದ್ದಿರುವುದು ಗೊತ್ತಾಗಿದೆ. ಇದು ಪೂರ್ವನಿಯೋಜಿತ ಕೃತ್ಯವೇ?, ಇವರ ಹಿಂದೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಮಸೀದಿ ಬಳಿ ನಡೆದಿದ್ದ ಔತಣಕೂಟಕ್ಕೆ ಹೊರಗಿನಿಂದ ಬಂದವರೇನಾದರೂ ಇದರಲ್ಲಿ ಇದ್ದಾರಾ ಎಂಬ ಬಗ್ಗೆಯೂ ತನಿಖೆ ಮಾಡಬೇಕು. ಇನ್ನು ೪ ಜನ ಆರೋಪಿಗಳನ್ನು ಬಂಧಿಸಬೇಕಿದೆ. ಕಲ್ಲೆಸೆತಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.