ಕನ್ನಡಪ್ರಭವಾರ್ತೆ ತುರುವೇಕೆರೆ
ಪಟ್ಟಣದಲ್ಲಿ ಸುಮಾರು 12 ವರ್ಷಗಳ ನಂತರ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ. ಆದರೆ ಇಂದಿರಾ ಕ್ಯಾಂಟೀನ್ ರವರು ಜನರಿಗೆ ನೀಡುವ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಂಟೀನ್ ನ ಉದ್ಘಾಟನೆ ಮಾಡಿದ ಅವರು ನಮ್ಮ ಸರ್ಕಾರ ಬಡವರ ಪರ, ಬಡವರ ಹೊಟ್ಟೆ ತುಂಬಿಸುವ ಕಾರ್ಯದಲ್ಲಿದೆ. ಬಡವರ ಉದ್ದಾರ ಆಗಬೇಕು ಎಂಬ ದೃಷ್ಠಿಯಿಂದಲೇ ನಾವು ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು. ಈ ಪಂಚ ಗ್ಯಾರಂಟಿಗಳು ಜಾರಿಗೆ ಬರುವ ಸಲುವಾಗಿ ರಚಿಸಲಾಗಿದ್ದ ಪ್ರಣಾಳಿಕೆ ಸಮಿತಿಗೆ ನಾನೇ ಅಧ್ಯಕ್ಷನಾಗಿದ್ದೆ. ಹಾಗಾಗಿ ನನ್ನ ಆಸೆ ನೆರವೇರಿದೆ. ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗ್ಗೆ 200 ಮಂದಿಗೆ ತಿಂಡಿ, ಮಧ್ಯಾಹ್ನ 200 ಮಂದಿಗೆ ಊಟ, ರಾತ್ರಿ 200 ಮಂದಿಗೆ ಊಟದ ವ್ಯವಸ್ಥೆ ಜಾರಿಯಲ್ಲಿದೆ. ಹೊಟ್ಟೆ ಹಸಿವಿನಿಂದ ನೂರಾರು ಮಂದಿ ಪರದಾಡುತ್ತಾರೆ. ಹಸಿವಿನಿಂದ ಬಂದವರನ್ನು ಬರಿಗೈಲಿ ಕಳಿಸಲು ಸಾಧ್ಯವಿಲ್ಲ. ಕಳಿಸಲೂ ಬಾರದು. ಇನ್ನೂ ನೂರಾರು ಮಂದಿಗೆ ತಿಂಡಿ ಊಟ ಅಗತ್ಯವಿದೆ. ಹಾಗಾಗಿ ಇಂದಿರಾ ಕ್ಯಾಂಟೀನ್ ನಡೆಸುವ ಗುತ್ತಿಗೆದಾರರು ಸರ್ಕಾರಕ್ಕೆ ಹೆಚ್ಚು ಸಂಖ್ಯೆ ಮಾಡಲು ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುವುದು ಎಂದು ಡಾ. ಜಿ.ಪರಮೇಶ್ವರ್ ತಿಳಿಸಿದರು.ರಾಜ್ಯ ಸರ್ಕಾರ ಜಮೀನಿನ ಹಕ್ಕನ್ನು ಜನ ಸಾಮಾನ್ಯರಿಗೆ ನೀಡುವ ಮಹತ್ತರವಾದ ಹೆಜ್ಜೆಯನ್ನು ಇಟ್ಟಿದೆ. ಹಲವಾರು ವರ್ಷಗಳಿಂದ ಭೂಮಿಯ ಹಕ್ಕುದಾರಿಕೆ ಪಡೆಯದೇ ಲಕ್ಷಾಂತರ ಕುಟುಂಬ ಪರದಾಡುತ್ತಿತ್ತು. ಇದನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡರು ಕ್ರಾಂತಿಕಾರಕ ಹೆಜ್ಜೆ ಇಡುವ ಮೂಲಕ ರಾಜ್ಯದ ರೈತರಲ್ಲಿ ಸಂತಸ ತಂದಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಇವತ್ತೇನೋ ಇಂದಿರಾ ಕ್ಯಾಂಟೀನ್ ನಲ್ಲಿ ಮಾಡಿದ್ದ ಪಲಾವ್, ಇಡ್ಲಿ ಚಟ್ನಿ ಚನ್ನಾಗಿದೆ. ನಾವೆಲ್ಲಾ ಬಂದಿದ್ದೀವಿ, ಪ್ರಾರಂಭದ ದಿನ ಅಂತ ಹೀಗೆ ಅಚ್ಚುಕಟ್ಟಾಗಿ ಮಾಡಿದ್ದೀರಾ. ಮಂದೆ ಇದೇ ಪ್ರಕಾರವೇ ಶುದ್ಧ, ರುಚಿಕರವಾಗಿರಬೇಕು. ನಾನು ದಿಢೀರನೇ ಬರ್ತಿನಿ. ಅವತ್ತೂ ಇದೇ ಪ್ರಕಾರ ಇದ್ದರೆ ಓಕೆ. ಇಲ್ಲದಿದ್ದರೆ, ನಾನು ಸುಮ್ಮನಿರುವ ವ್ಯಕ್ತಿ ಅಲ್ಲ. ಗೊತ್ತಿರಲಿ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದರು. ಅಲ್ಲದೇ ಬಡವರು ತಿನ್ನುವ ಆಹಾರದಲ್ಲಿ ಮೋಸ ಮಾಡಬೇಡಿ ಎಂದು ಸೂಚನೆ ನೀಡಿದರು.ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು, ಎಸ್ಪಿ ಅಶೋಕ್. ಉಪ ವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಎನ್.ಎ.ಕುಂಇ ಅಹಮದ್, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ಶಿವಪ್ಪ ನಾಯಕ, ಉಪಾಧ್ಯಕ್ಷೆ ಭಾಗ್ಯ ಮಹೇಶ್, ಸದಸ್ಯರಾದ ಚಿದಾನಂದ್, ಎನ್. ಆರ್.ಸುರೇಶ್, ಯಜಮಾನ್ ಮಹೇಶ್, ಆಶಾ ರಾಜಶೇಖರ್, ಜಯ್ಯಮ್ಮ, ರುದ್ರೇಶ್, ಶ್ರೀನಿವಾಸ್, ಜಫ್ರುಲ್ಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಪ್ರಭು, ಪ್ರಸನ್ನ ಕುಮಾರ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಳಾಲ ನಾಗರಾಜು, ದೇವರಾಜು, ಸೇರಿದಂತೆ ಹಲವಾರು ಗಣ್ಯರು ಇದ್ದರು.