ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ಪಟ್ಟಣ ಪಂಚಾಯಿತಿ ಮತ್ತು ಶ್ರೀ ಸತ್ಯ ಗಣಪತಿ ಸೇವಾ ಮಂಡಳಿ ಸಹಯೋಗದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕರ್ತವ್ಯ ನಿರ್ವಹಿಸಿದ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಿಪಿಐ ಆರ್.ಪಿ.ಅನಿಲ್ ಮಾತನಾಡಿ, ಯಾವುದೇ ಸಭೆ ಸಮಾರಂಭ ಮೆರವಣಿಗೆ ಕಾರ್ಯಕ್ರಮಗಳು ಯಶಸ್ವಿಯಾಗಲು ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅತಿಮುಖ್ಯ, ಸೆ.೬ ರಂದು ಕೊರಟಗೆರೆ ಪಟ್ಟಣದ ಎಲ್ಲಾ ಗಣೇಶಗಳನ್ನು ಒಂದೇ ಬಾರಿ ಮೆರವಣಿಗೆ ಹಾಗೂ ವಿಸರ್ಜನೆಯನ್ನು ಶಾಂತಿ, ಭಾವೈಕ್ಯತೆಯಿಂದ ಪೂರ್ಣಗೊಳಿಸಲು ಪಟ್ಟಣದ ಜನತೆ ಹಾಗೂ ಅಧಿಕಾರಿಗಳ ಸಹಕಾರದಿಂದ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಪ.ಪಂ.ಅನಿತಾ ಮಾತನಾಡಿ ಗಣಪತಿ ಹಬ್ಬವನ್ನು ಎಲ್ಲರೂ ಜಾತಿ ಮತಭೇದವನ್ನು ಮರೆತು ೧೧ ದಿನಗಳ ಕಾಲ ಆಚರಿಸಿದ್ದೇವೆ. ಮೆರವಣಿಗೆಯು ಪಟ್ಟಣದಲ್ಲಿ ವೈವಿದ್ಯಮಯವಾಗಿ ನಡೆದಿದ್ದು ಇದಕ್ಕೆ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗದ ಸಹಕಾರ ಹಾಗೂ ೧೧ ದಿನಗಳ ಸ್ವಚ್ಛತೆಯಲ್ಲಿ ನಮ್ಮ ಪೌರಕಾರ್ಮಿಕರ ಶ್ರಮ ಸಾಕಷ್ಟು ಇದೆ ಎಂದರು. ಪ.ಪಂ.ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ ರಾಜ್ಯದಲ್ಲಿ ಕೊರಟಗೆರೆ ಪಟ್ಟಣದ ಗಣಪತಿ ವಿಸರ್ಜನಾ ಮೆರವಣಿಗೆ ಉತ್ತಮ ಹೆಸರುಗಳಿಸಿಕೊಟ್ಟಿದೆ. ಪಟ್ಟಣದ ೧೯ ಬೃಹತ್ ಗಣಪತಿಗಳ ಮೂರ್ತಿಗಳನ್ನು ಸಾವಿರಾರು ಭಕ್ತರ ಜೊತೆಗೆ ಒಟ್ಟುಗೂಡಿ ವಿಸರ್ಜಿಸಿರುವುದು ಗೃಹ ಸಚಿವ ಕ್ಷೇತ್ರದಲ್ಲಿ ಸಾಧನೆಯಾಗಿದ್ದು ಇತಿಹಾಸ ನಿರ್ಮಿಸಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರಷೋತ್ತಮ್ ಮಾತನಾಡಿ ಈ ಬಾರಿಯ ಗಣೇಶ ಮೆರವಣಿಗೆ ದಸರಾ ವೈಭವದಂತೆ ಕಂಗೊಳಿಸುತ್ತಿತ್ತು, ನಮ್ಮ ಸಂಘದ ಪತ್ರಕರ್ತರು ಗಣೇಶ ಮಂಡಳಿಗಳಲ್ಲಿ ಪದಾಧಿಕಾರಿಗಳು ಸೇವೆ ಸಲ್ಲಿಸುವುದರೊಂದಿಗೆ ಮೆರವಣಿಗೆಯಲ್ಲೂ ಭಾಗವಹಿಸಿ ಪ್ರಚಾರವನ್ನು ನೀಡಿ ಕರ್ತವ್ಯ ನಿರ್ವಹಿಸಿದ್ದು ಎಲ್ಲಾ ಪತ್ರಕರ್ತರಿಗೂ ಅಭಿನಂದನೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪಿಎಸೈ ತೀರ್ಥೇಶ್, ಬಸವರಾಜು, ಪ.ಪಂ.ಸ್ಥಾಯಿಸಮಿತಿ ಅಧ್ಯಕ್ಷೆ ಹೇಮಲತಾ, ಸದಸ್ಯರುಗಳಾದ ಕೆ.ಎನ್.ಲಕ್ಷ್ಮೀನಾರಾಯಣ್, ಪುಟ್ಟನರಸಯ್ಯ, ನಂದೀಶ್, ಭಾರತಿ ಸಿದ್ದಮಲ್ಲಯ್ಯ, ಮಂಜುಳಾ ಗೋವಿಂದರಾಜು, ಫಯಾಜ್ ಅಹಮದ್, ಶ್ರೀ ಸತ್ಯಗಣಪತಿ ಸೇವಾ ಮಂಡಳಿಯ ಪದಾಧಿಕಾರಿಗಳಾದ ಕೆ.ಆರ್.ನಾಗೇಂದ್ರ, ಕೆ.ವಿ.ಮಂಜುನಾಥ್, ಗಣೇಶ್, ರಾಜಣ್ಣ, ಎಸ್.ಎನ್.ಆರಾಧ್ಯ, ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.