- ಇನ್ನು ಮುಂದೆ ನಮ್ಮ ಬಗ್ಗೆ ಎಚ್ಚರಿಕೆಯಿಂದ ಮಾತಾಡ್ಲಿ
ಜಿಂಕೆ ಕೊಂಬು ಪತ್ತೆಯಾದ ವೇಳೆ ನಾನು ಮುಖ್ಯಮಂತ್ರಿ ಬಳಿ ಅತ್ತಿದ್ದೇನೆಂದು ಮಾಜಿ ಸಂಸದರು ಹೇಳಿದ್ದಾರೆ. ನಾವು ಅಳುವವರಲ್ಲ, ಸೆಡ್ಡು ಹೊಡೆಯುವವರು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅವರು ಅಳಿಯ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರಗೆ ಟಾಂಗ್ ನೀಡಿದರು.
ನಗರದ ದೂಡಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲ್ಲೇಶ್ವರ ಮಿಲ್‌ನಲ್ಲಿ ಜಿಂಕೆ ಕೊಂಬು ಪತ್ತೆ ಪ್ರಕರಣದ ವೇಳೆ ನಾನು ಮುಖ್ಯಮಂತ್ರಿ ಬಳಿ ಅತ್ತೆ ಅಂತಾ ಹೇಳಿದ್ದವರು ಅರ್ಥ ಮಾಡಿಕೊಳ್ಳಬೇಕು. ನಾವು ಅಳುವವರಲ್ಲ, ಸೆಡ್ಡು ಹೊಡೆಯೋರು ಎಂದರು.ನನಗೀಗ 93 ವರ್ಷ ವಯಸ್ಸು. 72 ವರ್ಷದವನು ನನಗೆ ಬುದ್ಧಿ ಹೇಳಲಿಕ್ಕೆ ಬರುತ್ತಾನೆ. ಇನ್ನು ಮುಂದೆ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಅಂತಾ ನನ್ನ ಅಳಿಯನಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಸೋತ ಮೇಲೆ ಅವನೇನೋ ಗಂಟನ್ನು ಕಳೆದುಕೊಂಡವನಂತೆ ಅಲ್ಲಿ ಅಲ್ಲಿ ಅಳುತ್ತಿದ್ದಾನೆ. ಎಲೆಕ್ಷನ್ ಅಂದ ಮೇಲೆ ಸೋಲು, ಗೆಲುವು ಸಾಮಾನ್ಯವೆಂಬುದನ್ನು ಅವನು ಅರಿಯಬೇಕು. ಅವನು ಮತ್ತು ಅವರಪ್ಪನನ್ನು ಭೀಮಸಮುದ್ರದಿಂದ ದಾವಣಗೆರೆಗೆ ಕರಕೊಂಡು ಬಂದಿದ್ದು ಯಾರೆಂಬುದನ್ನೇ ಅವನು ಮರೆತಿದ್ದಾನೆ ಎಂದು ಸಿದ್ದೇಶ್ವರ ವಿರುದ್ಧ ಶಾಸಕ ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಬಾಕ್ಸ್ * ನನ್ನ ಸೊಸೆ ಗೆದ್ದಿದ್ದು ಹೇಗೆಂದು ಕೇಸ್ ಹಾಕ್ಸಿದ್ದಾನೆ ದಾವಣಗೆರೆ: ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸೊಸೆ ಡಾ.ಪ್ರಭಾ ಗೆದ್ದಿರುವುದು ಹೆಂಗೆಂದು ಕೇಸ್ ಹಾಕಿಸಿದ್ದಾನೆ. ಒಂದು ಮತದಲ್ಲಿ ಗೆದ್ದರೂ ಗೆಲುವು ಅನ್ನೋದನ್ನು ಅವನು (ಡಾ.ಸಿದ್ದೇಶ್ವರ) ತಿಳಿಯಲಿ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ಗೂಂಡಾಗಳನ್ನೂ ಅವನು ಸಾಕಿಕೊಂಡಿದ್ದಾನೆ. ಅವನು ಏನಾದರೂ ಮಾತನಾಡಬೇಕೆಂದರೆ ಎಚ್ಚರಿಕೆಯಿಂದ ಮಾತನಾಡಲಿ. ಒಂದು ಕಡೆ ಯಡಿಯೂರಪ್ಪ, ವಿಜಯೇಂದ್ರಗೆ ಬೈಯುತ್ತಾನೆ. ಮತ್ತೊಂದು ಕಡೆ ಬೈದೇ ಇಲ್ಲ ಅಂತಾನೆ. ಅಲ್ಲೊಂದು, ಇಲ್ಲೊಂದು ಮಾತನಾಡುತ್ತಾನೆ. ಅವನು ಮಾತನಾಡಿರುವ ಪತ್ರಿಕೆ ತುಣುಕುಗಳು ನನ್ನ ಬಳಿ ಇವೆ ಎಂದು ಅವರು ತಿಳಿಸಿದರು.
- - - -31ಕೆಡಿವಿಜಿ5, 6: