-450 ರುಪಾಯಿ ನೌಕರಿ, ಜೀವಕ್ಕಿಲ್ಲ ಖಾತರಿ । ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ । ಕಾರ್ಮಿಕರು-ಕುಟುಂಬಕ್ಕೆ ಭದ್ರತೆ, ಸುರಕ್ಷತೆ ಇಲ್ಲ!
- ಕನ್ನಡಪ್ರಭ ಸರಣಿ ವರದಿ - ಭಾಗ : 27
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಬಲ್ಲ ಮೂಲಗಳ ಪ್ರಕಾರ, ಬಹುತೇಕರದ್ದು ಶೋಚನೀಯ ಬದುಕು. ಹೊರಗುತ್ತಿಗೆ ಆಧಾರದ ಮೇಲೆ, ದಿನಕ್ಕೆ 450 ರು.ಗಳ ಕೂಲಿ ಆಧಾರದ ಮೇಲೆ ನೌಕರಿ ಸಿಕ್ಕರಾದರೂ, ಕಾರ್ಮಿಕರ ಜೀವಕ್ಕಿಲ್ಲಿಲ್ಲ ಖಾತರಿ ! ಕೆಲವೊಮ್ಮೆ ಅವಘಡಗಳು ನಡೆದಾಗ ಕಾರ್ಮಿಕರ ಪಟ್ಟಿಯೇ ನಿಗೂಢವಾಗುತ್ತದೆ. ಉತ್ತರ ಭಾರತದ ರಾಜ್ಯಗಳಿಂದ ಆಗಮಿಸಿದ್ದ ಅನೇಕರಲ್ಲಿ ಇದ್ದವರೆಷ್ಟು ? ಸತ್ತವರೆಷ್ಟು? ಅನ್ನೋದು ಹೊರಜಗತ್ತಿಗೆ ತಿಳಿಯೋದೇ ಇಲ್ಲವಂತೆ.
ಅಕಸ್ಮಾತ್ ಅವಘಡಗಳು ಸಂಭವಿಸಿದಾಗ, ಯಾವುದೇ ವಿವಾದ- ಕೇಸು ದಾಖಲಾಗದಂತೆ ಬಗೆಹರಿಸಲೆಂದು ಹೊರಗುತ್ತಿಗೆ ಆಧಾರದ ಮೇಲೆ ವಿವಿಧೆಡೆಯಿಂದ ಕಾರ್ಮಿಕರ ಕರೆತರುವ ಗುತ್ತಿಗೆದಾರನಿಗೆ ಒಂದಿಷ್ಟು ಹೆಚ್ಚಿನ ಹಣ ನೀಡಿ, ಕೈತೊಳೆದುಕೊಳ್ಳುತ್ತಾರೆ. ಕಾರ್ಮಿಕ ಇಲಾಖೆಯನ್ನೇ ಯಾಮಾರಿಸುವ ಕಂಪನಿಗಳು ಕಾರ್ಮಿಕರ ಪಟ್ಟಿಯನ್ನೇ ನಿಗೂಢವಾಗಿರಿಸುತ್ತವೆ.
ಕಾರ್ಮಿಕರ ಸಂಖ್ಯೆ, ಸ್ಥಿತಿಗತಿ, ವೇತನ- ಭತ್ಯೆಗಳು, ಅಪಾಯಕಾರಿ ಜಾಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಸುರಕ್ಷತೆ- ಭದ್ರತೆ, ಅವರ ಕುಟುಂಬದ ವಿವರ, ಸೌಲಭ್ಯಗಳ ಬಗ್ಗೆ ಕಂಪನಿಗಳು ಕಾಗದದದಲ್ಲಿ ನೀಡುವ ಮಾಹಿತಿಗೂ, ವಾಸ್ತವಕ್ಕೂ ತಾಳೆಯೇ ಆಗುವುದಿಲ್ಲ ಅಂತಾರೆ ಬದ್ದೇಪಲ್ಲಿಯ ರಮೇಶ.
ಸುರಕ್ಷತಾ ಸಾಧನ ನೀಡದ ಕೆಮಿಕಲ್ ಕಂಪನಿ: ಬದ್ದೇಪಲ್ಲಿ ತಾಂಡಾದ ಐವರಿಗೆ ಸುಟ್ಟ ಗಾಯ
ಲ್ಯಾಬೋರೇಟರೀಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬದ್ದೇಪಲ್ಲಿ ತಾಂಡಾದ ಐವರು ಯುವ ಕಾರ್ಮಿಕರ ಮೈಮೇಲೆ ಆಕಸ್ಮಿಕವಾಗಿ ಕೆಮಿಕಲ್ ಪೌಡರ್ ಬಿದ್ದು ಮೈಕೈಗಳಿಗೆ ಗಾಯವಾಗಿದೆ. ಘಟನೆ ನಡೆದು ಹದಿನೈದು ದಿನಗಳಾದರೂ, ಇವರಿಗೆ ಚಿಕಿತ್ಸೆ ಕೊಡಿಸಬೇಕಾದ ಕಂಪನಿ ಮಂಡಳಿ, ಕಾರ್ಮಿಕರದ್ದೇ ತಪ್ಪು ಎಂಬುವಂತೆ ಬಿಂಬಿಸಿ, ಬರಿಗೈಲಿ ವಾಪಸ್ಸು ಕಳುಹಿಸಿದ್ದ ಘಟನೆಯಿಂದ ಆಕ್ರೋಶಗೊಂಡ ಈ ನೊಂದ ಯುವಕರ ಗುಂಪು, ಶನಿವಾರ ಕಾರ್ಖಾನೆ ಆವರಣಕ್ಕೆ ಆಗಮಿಸಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆಗಳು ಹೊರಸೂಸುವ ವಿಷಗಾಳಿ, ತ್ಯಾಜ್ಯ ಘಾಟಿನಿಂದಾಗಿ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳ ಜೊತೆಗೆ, ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವಕ್ಕೂ ಯಾವುದೇ ರೀತಿಯ ಸುರಕ್ಷತೆ ಇಲ್ಲ ಎಂದು ಆರೋಪಿಸಲಾಗಿದೆ. ಇಂತಹ ಅವಘಡಗಳು ಈ ಹಿಂದೆ ನಡೆದಿವೆಯಾದರೂ, ಬೆಳಕಿಗೆ ಬರುವುದೇ ಇಲ್ಲ ಎನ್ನಲಾಗಿದೆ. ಉತ್ತರ ಭಾರತ, ಬಿಹಾರ್, ಓಡಿಸ್ಸಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇಲ್ಲಿದ್ದಾರೆ. ಅವರ ಸುರಕ್ಷತೆ, ಆರೋಗ್ಯ ವಿಚಾರದಲ್ಲಿ ಕಂಪನಿಗಳು ಬೇಜವಾಬ್ದಾರಿ ವಹಿಸುತ್ತವೆ. 10-12 ಸಾವಿರ ರು.ಗಳಿಗೆ ಇಲ್ಲಿ ಉದ್ಯೋಗ ಅರಸಿ ಬರುವ ಅವರುಗಳಿಗೆ ಸುರಕ್ಷತೆ - ಬದುಕಿನ ಭದ್ರತೆ ಇರುವುದಿಲ್ಲ. ಈ ಹಿಂದೆ, ಕಾರ್ಖಾನೆಯೊಂದರ ಬಾಯ್ಲರ್ ಬ್ಲಾಸ್ಟ್ ಆಗಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು, ಕೆಮಿಕಲ್ ಮಿಶ್ರಿತ ನೀರು ಹಳ್ಳಕ್ಕೆ ಬಿಟ್ಟ ಪರಿಣಾಮ ಸಾವಿರಾರು ಜಲಚರಗಳು ಸಾವನ್ನಪ್ಪಿದ್ದ ಘಟನೆಗಳು ಇಲ್ಲಿನವರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.
-ಕೋಟ್- 1 : ಇಂತಹ ಅನೇಕ ಅವಘಡಗಳು, ಪ್ರಕರಣಗಳು ಅಲ್ಲಿ ನಡೆಯುತ್ತಾವಾದರೂ, ಎಲ್ಲವನ್ನೂ ಮುಚ್ಚಿ ಹಾಕಲಾಗುತ್ತದೆ. ಕ್ರಮ ಕೈಗೊಳ್ಳಬೇಕಾದ ಕೆಲವು ಪೊಲೀಸ್, ಆರೋಗ್ಯ ಇಲಾಖೆ ವೈದ್ಯರೂ ಕಂಪನಿಗಳ ಪರವಾಗಿ ಏಜೆಂಟರಂತೆ ಕೆಲಸ ಮಾಡಿ, ಒಂದಿಷ್ಟು ದುಡ್ಡು ತೆಗೆದುಕೊಂಡು ಅಡ್ಜಸ್ಟ್‌ಮೆಂಟ್ ಆಗಿ ಅಂತಾರೆ. ನಮ್ಮಂತಹವರು ಬದುಕಲು ಉದ್ಯೋಗ ಅನಿವಾರ್ಯವಾಗಿದ್ದರಿಂದ ಸಹಿಸಿಕೊಳ್ಳುತ್ತೇವೆ. - ರಾಚನಹಳ್ಳಿಯ ಆಂಜನೇಯ (ಹೆಸರು ಬದಲಾಯಿಸಲಾಗಿದೆ) ಫಾರ್ಮಾ ಕಂಪನಿಯ ಹೊರಗುತ್ತಿಗೆ ಕಾರ್ಮಿಕ.
-4ವೈಡಿಆರ್1 : ಕೆಮಿಕಲ್ ಪೌಡರ್ ಬಿದ್ದು ತಮಗಾದ ಗಾಯಗಳನ್ನು ತೋರಿಸುತ್ತಿರುವ ಕಾರ್ಮಿಕರು.
4ವೈಡಿಆರ್2 : ಕೆಮಿಕಲ್ ಕಂಪನಿಗಳಲ್ಲಿ ಅಪಾಯಕಾರಿ ರಾಸಾಯನಿಕದಿಂದಾಗಿ ಕಾರ್ಮಿಕರಿಗಾದ ಗಾಯ4ವೈಡಿಆರ್3 : ಕೆಮಿಕಲ್ ಕಂಪನಿಗಳಲ್ಲಿ ಅಪಾಯಕಾರಿ ರಾಸಾಯನಿಕದಿಂದಾಗಿ ಕಾರ್ಮಿಕರಿಗಾದ ಗಾಯ