ಸದ್ಯಕ್ಕೆ ಜಾತಿಗಣತಿ ವರದಿ ಬಿಡುಗಡೆ ಮಾಡಲ್ಲ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ರಾಜ್ಯದಲ್ಲಿ ಹಿಂದೆ ಕೈಗೊಂಡ ಜಾತಿಗಣತಿ ವರದಿ ಅಂಗೀಕರಿಸದಂತೆ, ಬಿಡುಗಡೆ ಮಾಡದಂತೆ ಬೆಳಗಾವಿಯಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯಗೆ ಮಹಾಸಭಾದಿಂದ ಎಲ್ಲಾ ಶಾಸಕರ ಸಹಿ ಮಾಡಿ, ಕೊಟ್ಟಿದ್ದೇವೆ: ಶಾಸಕ ಶಾಮನೂರು ಹೇಳಿಕೆ

ಅಭಾವೀಮ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡದಂತೆ ಬೆಳಗಾವಿಯಲ್ಲಿ ನಾವು ಶುಕ್ರವಾರ ಮನವಿ ನೀಡಿದ್ದು, ವರದಿ ಬಿಡುಗಡೆ ಮಾಡುತ್ತೇವೆ ಅಥವಾ ಮಾಡುವುದಿಲ್ಲವೆಂದಾಗಲೀ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿ ಬಿಟ್ಟು ಏನೂ ಹೇಳಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಿಂದೆ ಕೈಗೊಂಡ ಜಾತಿಗಣತಿ ವರದಿ ಅಂಗೀಕರಿಸದಂತೆ, ಬಿಡುಗಡೆ ಮಾಡದಂತೆ ಬೆಳಗಾವಿಯಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯಗೆ ಮಹಾಸಭಾದಿಂದ ಎಲ್ಲಾ ಶಾಸಕರ ಸಹಿ ಮಾಡಿ, ಕೊಟ್ಟಿದ್ದೆವು ಎಂದರು. ಜಾತಿಗಣತಿ ವರದಿಯನ್ನು ತಾವೇ ಇನ್ನೂ ಸರಿಯಾಗಿ ನೋಡಿಲ್ಲವೆಂಬುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಸದ್ಯಕ್ಕಂತೂ ಮುಖ್ಯಮಂತ್ರಿಯವರು ಜಾತಿ ಗಣತಿ ವರದಿ ಬಿಡುಗಡೆ ಮಾಡಲ್ಲ. ನಾವೂ ಹಳೆ ಜಾತಿಗಣತಿ ವರದಿ ವೈಜ್ಞಾನಿಕವಾಗಿ ಇಲ್ಲ. ವೈಜ್ಞಾನಿಕವಾಗಿ ಹೊಸದಾಗಿ ಜಾತಿಗಣತಿ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಡಿ.23ರಿಂದ ಎರಡು ದಿನಗಳ ಕಾಲ ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಅಧಿವೇಶನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಎಲ್ಲಾ ವೀರಶೈವ ಲಿಂಗಾಯತ ನಾಯರಿಗೂ ಆಹ್ವಾನಿಸಿದ್ದೇವೆ ಎಂದು ಹೇಳಿದರು.

.............. ಸಿಎಂ ಕರೆಯದೇ ಹೇಗೆ ಬರ್ತಾರೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವೀರಶೈವ ಲಿಂಗಾಯ ಮಹಾ ಅಧಿವೇಶನಕ್ಕೆ ಕರೆದಿಲ್ಲ. ಕರೆಯದಿದ್ದರೆ ಹೇಗೆ ಬರುತ್ತಾರೆ? ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ನಡೆಸುವ ಬಗ್ಗೆ ನನಗೇನೂ ಗೊತ್ತಿಲ್ಲ. ಅವರು ಅಲ್ಲಿ ಸಮಾವೇಶ ಮಾಡಿದರೆ, ನಾವು ಇಲ್ಲಿ ಮಾಡುತ್ತಿದ್ದೀವಲ್ಲ ಮಹಾ ಸಮಾವೇಶನಾ ಎನ್ನುವ ಮೂಲಕ ಪ್ರಶ್ನೆಯೊಂದಕ್ಕೆ ಅಷ್ಟೇ ತೀಕ್ಷ್ಣವಾಗಿ ಡಾ.ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.

.............

Share this article