ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಹೊಸ ವಿವಿಗಳ ಕಾರ್ಯಾಚಟುವಟಿಕೆ ಬಗ್ಗೆ ಸರ್ಕಾರ ಪ್ರತ್ಯೇಕ ಕಾನೂನು ಹಾಗೂ ನಿಯಮ ರೂಪಿಸಿ ಉನ್ನತ ಶಿಕ್ಷಣಕ್ಕೆ ಹೊಸ ಆಯಾಮ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಕೊಡಗು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಹೊಸ ವಿವಿಗಳಲ್ಲಿ ಸಮರ್ಪಕ ಸಿಬ್ಬಂದಿ ಕೊರತೆ, ಅನುದಾನ, ನಿವೇಶನ, ಕಟ್ಟಡ ಕೊರತೆಯಿಂದ ಉನ್ನತ ಶಿಕ್ಷಣ ವ್ಯವಸ್ಥೆಗೆ ತೊಂದರೆಯಾಗಿದೆ. ಈ ಹಿಂದಿನ ಸರ್ಕಾರದ ಅವೈಜ್ಞಾನಿಕ ನಿರ್ಧಾರವನ್ನು ಸರಿಪಡಿಸುವ ಉದ್ದೇಶದಿಂದ ಉನ್ನತ ಶಿಕ್ಷಣಕ್ಕೆ ಹೊಸ ಆಯಾಮ ನೀಡಲಾಗುತ್ತಿದೆ ಎಂದರು.ಕೊಡಗು ವಿವಿ ಕಾನೂನು ಬಾಹಿರ:
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಂಗಳೂರು ವಿವಿ ಇಬ್ಭಾಗಿಸಿ ಕೊಡಗು ವಿವಿ ಎಂಬ ಹೊಸ ವಿಶ್ವವಿದ್ಯಾಲಯ ಅಸ್ಥಿತ್ವಕ್ಕೆ ತಂದಿದ್ದು, ಕೊಡಗು ವಿವಿ ಎಂಬುವುದು ಕಾನೂನು ಬಾಹಿರ. ತಾರಾತುರಿಯಲ್ಲಿ ಕೇವಲ 2 ಕೋಟಿ ರು. ಅನುದಾನ ನೀಡಿ ಕೊಡಗು ವಿವಿ ಮಾಡಲಾಗಿದೆ, ಜತೆಗೆ ಹಲವು ಅವೈಜ್ಞಾನಿಕ ಷರತ್ತು ವಿಧಿಸಿ ಹೊಸ ವಿವಿಯ ಸ್ವಾತಂತ್ರ್ಯವನ್ನು ತಡೆ ಹಿಡಿಯಲಾಗಿದೆ. ಬಿಜೆಪಿ ಸರ್ಕಾರದ ತರಾತುರಿಯ ನಿರ್ಧಾರಗಳಿಂದಾಗಿಯೇ ಈಗ ಹೊಸ ವಿವಿಗಳಲ್ಲಿ ಅಸ್ತಿರತೆ ಕಾಡುತ್ತಿದೆ ಎಂದರು.ಹಾಸ್ಟೆಲ್ ಕಾಮಗಾರಿ ಸಮಗ್ರ ತನಿಖೆ:
ಕಾಮಗಾರಿ ಅರ್ಧಕ್ಕೆ ನಿಂತು ಪಾಳುಬಿದ್ದ ಮಂಗಳೂರು ವಿವಿ ಕ್ಯಾಪಸ್‌ನಲ್ಲಿರುವ ಅಂತಾರಾಷ್ಟ್ರೀಯ ಹಾಸ್ಟೇಲ್ ಹೆಸರಲ್ಲಿ ಕೋಟ್ಯಂತ ರು. ಪಾವತಿಸಿದ ಬಗ್ಗೆ ಸಮಗ್ರ ತನಿಖೆ ಮಾಡಲಾಗುವುದು ಎಂದರು.ಹೆಸರಿಗೆ ಅಂತಾರಾಷ್ಟ್ರೀಯ ಹಾಸ್ಟೇಲ್, ಕಾಮಗಾರಿ ಸ್ಥಗಿತಗೊಂಡು 5 ವರ್ಷ ಕಳೆದಿದೆ, ಆದರೆ ಪಾಳುಬಿದ್ದ ಹಾಸ್ಟೇಲ್ ಹೆಸರಲ್ಲಿ ಕೋಟಿ ಕೋಟಿ ರು. ಪಾವತಿಯಾಗಿರುವ ಬಗ್ಗೆ ಈವರೆಗೆ ಯಾವುದೇ ದೂರು ಬಂದಿಲ್ಲ. ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆ ಆಗಿದೆ ಎಂದರೆ ದೊಡ್ಡ ಲೋಪ, ಈಗಷ್ಟೆ ಈ ವಿಚಾರ ತಿಳಿದುಬಂದಿರುವುದರಿಂದ ಈ ಬಗ್ಗೆ ಮಾಹಿತಿ ಪಡೆದು ತನಿಖೆಗೆ ಸೂಚಿಸಲಾಗುವುದು ಎಂದರು.
ಶೀಘ್ರ ತುಳು ಪಿ.ಜಿ ಸೆಂಟರ್:ವಿವಿ ಕುಲಪತಿ ಪ್ರೊ. ಜಯರಾಜ್ ಅಮೀನ್ ಮಾತನಾಡಿ, ತುಳು ಸ್ನಾತಕೋತ್ತರ ವಿಭಾಗವನ್ನು ಕನ್ನಡ ವಿಭಾಗದಿಂದ ಪ್ರತ್ಯೇಕಿಸಿ ಹೊಸ ತುಳು ಸ್ನಾತಕೋತ್ತರ ಸಂಶೋಧನಾ ವಿಭಾಗ ಆರಂಭಿಸುವ ಯೋಜನೆ ಅಂತಿಮ ಹಂತದಲ್ಲಿದ್ದು, ಸಮಗ್ರ ದಾಖಲೆಗಳನ್ನು ಸರ್ಕಾರದ ಒಪ್ಪಿಗೆಗಾಗಿ ಸಲ್ಲಿಸಲಾಗಿದೆ. ಸರ್ಕಾರ ಒಪ್ಪಿಗೆ ಸೂಚಿಸಿದ ಕೂಡಲೇ ರಾಜ್ಯದ ಮೊದಲ ತುಳು ಪಿ.ಜಿ ಸೆಂಟರ್ ಆರಂಭಿಸಿ ತುಳು ಸ್ನಾತಕೋತ್ತರ ಶಿಕ್ಷಣ, ಸಂಶೋಧನೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ವಿಧಾನಸಭಾ ಸದಸ್ಯ ಮಂಜುನಾಥ ಭಂಡಾರಿ, ವಿವಿ ಪರೀಕ್ಷಾಂಗ ಕುಲಸಚಿವ ರಾಜುಕೃಷ್ಣ ಚಲನ್ನವರ್, ಹಣಕಾಸು ಅಧಿಕಾರಿ ಡಾ.ಸಂಗಪ್ಪ ಇದ್ದರು.ಎಸ್‌ಇಪಿ ಗೊಂದಲವಿಲ್ಲ: ಸಚಿವ ಡಾ.ಸುಧಾಕರ್
ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಯನ್ನು ಕರ್ನಾಟಕ ಮತ್ರ ಅಳವಡಿಸಿಕೊಂಡಿದ್ದು, ಬೇರೆ ಯಾವುದೇ ರಾಜ್ಯದಲ್ಲಿ ಈ ನೀತಿ ಜಾರಿಯಾಗಿಲ್ಲ. ಯೋಗ, ಭಗವದ್ಗೀತೆ ಕಲಿಯುವುದಕ್ಕೆ ಅಥವಾ ಮೂರರಿಂದ ನಾಲ್ಕು ವರ್ಷದ ಡಿಗ್ರಿ ಮಾಡಲು ಎನ್‌ಇಪಿ ಜಾರಿ ಮಾಡಬೇಕಿದೆಯೇ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಪ್ರಶ್ನಿಸಿದರು.ಎನ್‌ಇಪಿ ಬದಲು ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೆ ತರಲಿದ್ದೇವೆ. ಇದರ ಬಗ್ಗೆ ತಜ್ಞರು ಈಗಾಗಲೇ ರೂಪುರೇಷೆ ತಯಾರಿಸಿದ್ದಾರೆ. ಹೊಸ ನೀತಿ ಜಾರಿಯಾದ ಬಳಿಕ ಅದರ ಪ್ರಕಾರ ಪ್ರವೇಶಾತಿ ನಡೆಯಲಿದೆ. ಈಗಾಗಲೇ ಎನ್‌ಇಪಿ ಅಡಿಯಲ್ಲಿ ಸೆಮಿಸ್ಟರ್ ಕಲಿಯುತ್ತಿರುವವರಿಗೆ ಅಥವಾ ಮೂರು ವರ್ಷ ಪೂರ್ತಿಗೊಳಿಸಿದವರಿಗೆ ಹೊಸ ನೀತಿಯಿಂದ ತೊಂದರೆಯಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಉದ್ಯೋಗ ಕ್ಷೇತ್ರದಲ್ಲಿ ಇಂಗ್ಲಿಷ್ ಭಾಷಾ ಜ್ಞಾನ ಅತ್ಯಗತ್ಯವಾಗಿದ್ದು, ಇದಕ್ಕಾಗಿ ಉನ್ನತ ಶಿಕ್ಷಣದಲ್ಲಿ ಉಚಿತವಾಗಿ ಇಂಗ್ಲಿಷ್ ಕಲಿಸಲು ವಾಧ್ವಾನಿ ಫೌಂಡೇಷನ್ ಮುಂದೆ ಬಂದಿದೆ. ಆರಂಭದಲ್ಲಿ ಧಾರವಾಡ ವಿವಿಯಲ್ಲಿ ಫೌಂಡೇಷನ್‌ನಿಂದ ಉಚಿತ ಬೋಧನೆ ನಡೆಯಲಿದೆ. ಬಳಿಕ ಅದನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು ಎಂದರು.