ಕುಕ್ಕೆ: ರಾಮ ಮಂತ್ರಾಕ್ಷತೆ, ಆಮಂತ್ರಣ ವಿತರಣಾ ಅಭಿಯಾನ ಆರಂಭ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಮ ಮಂತ್ರಾಕ್ಷತೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮನೆಮನೆ ಸಂಪರ್ಕ ಮತ್ತು ಮಂತ್ರಾಕ್ಷತೆ ಹಾಗೂ ಆಮಂತ್ರಣ ವಿತರಣಾ ಅಭಿಯಾನವು ಸುಬ್ರಹ್ಮಣ್ಯದಲ್ಲಿ ಆರಂಭವಾಗಿದೆ.

ಕುಕ್ಕೆ ದೇವಳದ ಅಭಯ ಆಂಜನೇಯ ಗುಡಿಯಲ್ಲಿ ಅಯೋಧ್ಯೆಯಿಂದ ಆಗಮಿಸಿದ ರಾಮ ಮಂತ್ರಾಕ್ಷತೆಯನ್ನು ಇರಿಸಲಾಗಿತ್ತು. ಅದನ್ನು ಮೊದಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಅರ್ಪಿಸಲಾಯಿತು. ಬಳಿಕ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ನೀಡಲಾಯಿತು.

ಮಂತ್ರಾಕ್ಷತೆ ಸ್ವೀಕರಿಸಿ ಮಾತನಾಡಿದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ರಾಮ ಸೇವೆಯಲ್ಲಿ ತೊಡಗಿಸಿಕೊಳ್ಳಲು ದೊರಕಿರುವುದು ಮಹಾಭಾಗ್ಯ. ಭಗವಂತನ ಸ್ವರೂಪವಾದ ಮಂತ್ರಾಕ್ಷತೆ ಮನೆಗೆ ಬರುವುದು ದೇವರೆ ಮನೆಗೆ ಬಂದಂತೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೋಟ್ಯಂತರ ಭಕ್ತರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಎಷ್ಟೋ ವರ್ಷಗಳ ಹಿಂದಿನಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂಬ ಕನಸು ಹಿಂದುಗಳದ್ದಾಗಿತ್ತು. ಇದೀಗ ಬಹು ವರ್ಷಗಳ ಕನಸು ನನಸಾಗಿದೆ. ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವವನ್ನು ಭಕ್ತಿ ಸಡಗರದಿಂದ ಆಚರಿಸೋಣ ಎಂದರು.ಈ ಸಂದರ್ಭ ಕರಸೇವಕರಾದ ವೇಣುಗೋಪಾಲ ಶಾಸ್ತ್ರಿ, ಗಿರಿಧರ ಸ್ಕಂದ, ಚಿದಾನಂದ ಕಂದಡ್ಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಹ ಕಾರ್ಯವಾಹ ಮನೋಜ್ ಸುಬ್ರಹ್ಮಣ್ಯ, ತಾಲೂಕು ಸಾಮರಸ್ಯ ಸಂಯೋಜಕ್ ಶ್ರೀಕುಮಾರ್ ಬಿಲದ್ವಾರ, ಸುಬ್ರಹ್ಮಣ್ಯ ಮಂಡಲ ಕಾರ್ಯವಾಹ ರಾಮಚಂದ್ರ ದೇವರಗದ್ದೆ, ಹಿರಿಯ ಕಾರ್ಯಕರ್ತ ನಾರಾಯಣ ಭಟ್ ದೇವರಹಳ್ಳಿ, ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಗಿರಿಧರ್, ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ವೆಂಕಟೇಶ್ ಎಚ್.ಎಲ್., ದಿಲೀಪ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಕಾರ್ಯಕರ್ತರಾದ ಚಂದ್ರಶೇಖರ ಜಾಡಿಮನೆ, ನವೀನ್ ಕಟ್ರಮನೆ, ಭುಕ್ಷಿತ್, ಶಿವರಾಮ ಪಳ್ಳಿಗದ್ದೆ, ಅಚ್ಚುತ್ತ ಗೌಡ, ಜಯರಾಮ ನೂಚಿಲ, ಶಿವರಾಮ ಭಟ್, ಮೋಹಿನಿ ದೇವರಗದ್ದೆ, ಲಕ್ಷ್ಮೀಶ ಇಜಿನಡ್ಕ, ವಿನೋದ್ ಕುಲ್ಕುಂದ ಉಪಸ್ಥಿತರಿದ್ದರು.

ಮನೆಮನೆ ಅಭಿಯಾನ: ಶ್ರೀಗಳಿಗೆ ನೀಡಿದ ನಂತರ ಮಂತ್ರಾಕ್ಷತೆಯನ್ನು ಕರಸೇವಕರಾದ ವೇಣುಗೋಪಾಲ ಶಾಸ್ತ್ರಿ, ವನಜಾ.ವಿ.ಭಟ್, ಗಿರಿಧರ ಸ್ಕಂಧ, ಚಿದಾನಂದ ಕಂದಡ್ಕ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ಸುಬ್ರಹ್ಮಣ್ಯ ಮಂಡಲದ ೮ ಉಪವಸತಿಗಳ ಮನೆ ಮನೆಗೆ ರಾಮಾಕ್ಷತೆಯನ್ನು ಕಾರ್ಯಕರ್ತರು ತಲುಪಿಸುವ ಕಾರ್ಯ ಆರಂಭಿಸಿದರು.

Share this article