ಸಂಕ್ರಾಂತಿ ಅಂಗವಾಗಿ ಮನೆ ಮನೆಗಳಲ್ಲಿ ಎಳ್ಳು-ಬೆಲ್ಲ ಸಂಭ್ರಮ

KannadaprabhaNewsNetwork |  
Published : Jan 16, 2024, 01:48 AM IST
೧೫ಕೆಪಿ ಎಸ್ಎಂಜಿ ೦2ಶಿವಮೊಗ್ಗ ನಗರದ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹೂವುಗಳ ಖರೀದಿ ಜೋರಾಗಿತ್ತು. | Kannada Prabha

ಸಾರಾಂಶ

ಮಕರ ಸಂಕ್ರಮಣ ಹಬ್ಬವನ್ನು ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಹಿನ್ನೆಲೆ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದರೆ, ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಕರ ಸಂಕ್ರಮಣ ಹಬ್ಬವನ್ನು ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಹಿನ್ನೆಲೆ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದರೆ, ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿತು.

ಹಬ್ಬಕ್ಕೆ ಬೇಕಾದ ಹೂವು-ಹಣ್ಣು ಮತ್ತಿತರ ಸಾಮಗ್ರಿಗಳ ಬೆಲೆಯಲ್ಲಿ ಅಲ್ಪ ಏರಿಕೆ ಇದ್ದರೂ, ಅದನ್ನು ಲೆಕ್ಕಿಸದೇ ಜನ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಅಗತ್ಯ ವಸ್ತುಗಳನ್ನು ಖರೀದಿಸಲು ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಸ್ತೋಮ ನೆರೆದಿತ್ತು.

ಬೆಳಗ್ಗೆಯಿಂದಲೇ ನಗರದ ಗಾಂಧಿ ಬಜಾರ್, ಶಿವಪ್ಪ ನಾಯಕ ಮಾರುಕಟ್ಟೆ, ಗೋಪಿ ವೃತ್ತ, ಜೈಲ್ ವೃತ್ತ, ಲಕ್ಷ್ಮೀ ಟಾಕೀಸ್ ವೃತ್ತದಲ್ಲಿ ಹೂವು, ಹಣ್ಣು, ಕಬ್ಬು, ಬಾಳೆಗಿಡ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ಸಾಗಿತ್ತು.

ಎಳ್ಳು-ಬೆಲ್ಲ ಮಾರಾಟ ಭರಾಟೆ:

ಸಂಕ್ರಾತಿಗೆ ಮುಖ್ಯವಾಗಿ ಬೇಕಿರುವ ಎಳ್ಳುಬೆಲ್ಲ, ಕಬ್ಬು, ಕಡ್ಲೆಕಾಯಿ ಗಿಡಗಳಿಗೆ ಬೇಡಿಕೆ ಹೆಚ್ಚಿದ್ದು, ಇದರ ಪರಿಣಾಮವಾಗಿ ಇವೆಲ್ಲವುದರ ಬೆಲೆ ತುಸು ಏರಿಕೆ ಕಂಡಿತು. ಸಿದ್ಧಪಡಿಸಿದ 1 ಕೆ.ಜಿ. ಎಳ್ಳು-ಬೆಲ್ಲದ ಪೊಟ್ಟಣಕ್ಕೆ ₹350, ಕಬ್ಬಿನ ಜಿಲ್ಲೆಯೊಂದಕ್ಕೆ ₹50 ನೀಡಬೇಕಾಯಿತು. ಶಿವಮೊಗ್ಗ ನಗರದಲ್ಲಿ ಕೆಲವೊಂದು ಮಹಿಳಾ ಸ್ವಸಹಾಯ ಸಂಘಗಳು ಕೆಲವು ಕ್ವಿಂಟಲ್‌ಗಳಷ್ಟು ಎಳ್ಳು ಬೆಲ್ಲವನ್ನು ಸಿದ್ಧಪಡಿಸಿ ಮಾರಾಟ ಮಾಡಿ ಭರ್ಜರಿ ಲಾಭ ಮಾಡಿಕೊಂಡರು.

ಹಾಗೆಯೇ ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿತ್ತು. ಕಿತ್ತಳೆ ಕೆಜಿಗೆ ₹80, ಸೇಬು ₹180-₹200, ಬಾಳೆ ₹80-₹100, ದಾಳಿಂಬೆ ₹200, ಸೀತಾಫಲ ₹150, ಮೋಸುಂಬಿ ₹100, ದ್ರಾಕ್ಷಿ ₹100-₹120 ಇತ್ತು. ಅಲ್ಲದೇ, ದೇವರಿಗೆ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಹುತೇಕ ಎಲ್ಲರ ಮನೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ವಿಶೇಷ ಅಡುಗೆಯನ್ನು ಸಿದ್ಧಪಡಿಸಲಾಗಿತ್ತು.

ಸಂಕ್ರಾಂತಿ ಎಂದರೆ ತಮ್ಮ ಸ್ನೇಹಿತರಿಗೆ, ಅಕ್ಕಪಕ್ಕದ ನಿವಾಸಿಗಳಿಗೆ ಎಳ್ಳು-ಬೆಲ್ಲ ಹಂಚ್ಚುವುದು ಹಿಂದಿನಿಂದ ನಡೆದು ಬಂದ ಪದ್ಧತಿ. ಅದರಂತೆ ವಿಶೇಷವಾಗಿ ಹೆಣ್ಣುಮಕ್ಕಳು ಎಳ್ಳು-ಬೆಲ್ಲದ ಜೊತೆಗೆ ಕಬ್ಬಿನ ತುಂಡನ್ನು ನೆರೆಹೊರೆಯವರಿಗೆ, ಸ್ನೇಹಿತರಿಗೆ ಹಂಚುವ ಮೂಲಕ ಸಂಭ್ರಮಿಸಿದರು.

ಗ್ರಾಮೀಣ ಪ್ರದೇಶದಲ್ಲೂ ಸಡಗರ:

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿಯೂ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ರೈತರು ತಮ್ಮ ಕೃಷಿ ಪರಿಕರಗಳನ್ನು ಶುಚಿಗೊಳಿಸಿ ಪೂಜಿಸಿದರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು.

- - - -15ಕೆಪಿಎಸ್ಎಂಜಿ೦2: ಶಿವಮೊಗ್ಗ ನಗರದ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹೂವುಗಳ ಖರೀದಿಯಲ್ಲಿ ತೊಡಗಿರುವ ಜನತೆ.

-15ಕೆಪಿಎಸ್ಎಂಜಿ೦4: ಶಿವಮೊಗ್ಗ ನಗರದ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕಬ್ಬು ಖರೀದಿ ಸಂಭ್ರಮ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು