ರಾಜ್ಯದ ಶಿಫಾರಸ್ಸಿನಂತೆ ದೇವದಾರಿ ಗಣಿಗಾರಿಕೆಗೆ ಅಸ್ತು: ಎಚ್‌ಡಿಕೆ

KannadaprabhaNewsNetwork |  
Published : Jun 19, 2024, 01:02 AM IST
ಎಚ್‌.ಡಿ.ಕುಮಾರಸ್ವಾಮಿ | Kannada Prabha

ಸಾರಾಂಶ

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಎರಡು ಕಂಪನಿಗಳಿಗೆ ನೀಡಿರುವ ಗಣಿ ಗುತ್ತಿಗೆಯ ಪ್ರಕ್ರಿಯೆ 2016ರಿಂದಲೇ ನಡೆದಿದ್ದು, ಕೊನೆಯ ಹಂತದಲ್ಲಿ ಫೈಲ್‌ ಕ್ಲಿಯರೆನ್ಸ್‌ ಮಾತ್ರ ನನ್ನ ಬಳಿ ಬಂದಿತ್ತು ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಎರಡು ಕಂಪನಿಗಳಿಗೆ ನೀಡಿರುವ ಗಣಿ ಗುತ್ತಿಗೆಯ ಪ್ರಕ್ರಿಯೆ 2016ರಿಂದಲೇ ನಡೆದಿದ್ದು, ಕೊನೆಯ ಹಂತದಲ್ಲಿ ಫೈಲ್‌ ಕ್ಲಿಯರೆನ್ಸ್‌ ಮಾತ್ರ ನನ್ನ ಬಳಿ ಬಂದಿತ್ತು ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಗಣಿ ಗುತ್ತಿಗೆ ನೀಡಿರುವ ತಮ್ಮ ವಿರುದ್ಧ ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್‌. ಹಿರೇಮಠ ಮಾಡಿದ ಆರೋಪಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದರು. ಸಂಡೂರು ದೇವದಾರಿ ಪ್ರದೇಶದಲ್ಲಿ ಗಣಿ ಗುತ್ತಿಗೆ ನೀಡುವ ಕುರಿತು 2016ರಿಂದಲೇ ಪ್ರಸ್ತಾವನೆ ಇತ್ತು. ಈಗ ನನ್ನಿಂದಾಗಿ ಗುತ್ತಿಗೆ ನೀಡುವ ಕಾರ್ಯವಾಗಿಲ್ಲ. ಸಂಡೂರು ಪ್ರದೇಶದಲ್ಲಿ ಗಣಿಗಾರಿಕೆಗೆ ಒಪ್ಪಿಗೆಯ ಪ್ರಸ್ತಾವನೆ ರಾಜ್ಯದಿಂದ ಹೋಗಿತ್ತು. 2017ರಲ್ಲಿ ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿವೆ. 2016ರಿಂದ ಪ್ರಾರಂಭವಾಗಿ ಸಹಿ ಹಂತಕ್ಕೆ ಮಾತ್ರ ನನ್ನ ಬಳಿ ಫೈಲ್‌ ಬಂದಿತ್ತು. ಎಸ್‌.ಆರ್‌. ಹಿರೇಮಠ ಅವರು ನೇರವಾಗಿ ಬಂದು ನನ್ನನ್ನು ಭೇಟಿಯಾದರೆ ಅವರೊಂದಿಗೆ ಚರ್ಚೆ ಮಾಡುತ್ತೇನೆ. ಈ ವಿಷಯದಲ್ಲಿ ನಾನು ಮುಕ್ತನಾಗಿದ್ದೇನೆ. ನ್ಯಾಯಾಲಯದ ಸಮಸ್ಯೆಗಳು ಮುಗಿದಿದ್ದರಿಂದಲೇ ನಾನು ಸಹಿ ಮಾಡಿದ್ದು. ಅಲ್ಲಿ ಅದಿರು ಉತ್ಪಾದನೆಗೆ ಮಾತ್ರ ಒಪ್ಪಿಗೆ ನೀಡಲಾಗಿದೆ. ಇದು ಹೊಸದಾದ ಗಣಿಗಾರಿಕೆಗೆ ಅನುಮತಿ ಅಲ್ಲ. ಹಿರೇಮಠ ಅವರಿಗೆ ಈ ವಿಷಯದಲ್ಲಿ ಗೊಂದಲಗಳಿದ್ದರೆ ನನ್ನನ್ನು ಭೇಟಿಯಾಗಲಿ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸಂಡೂರು ದೇವದಾರಿ ಗಣಿಗಾರಿಕೆಗೆ 2016ರಲ್ಲೇ ಅಂದಿನ ರಾಜ್ಯ ಸರ್ಕಾರದ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 404 ಹೆಕ್ಟೇರ್‌ಗೆ ಪರ್ಯಾಯವಾಗಿ 808 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯೀಕರಣಗೊಳಿಸುವುದಾಗಿ ಗಣಿ ಕಂಪನಿ ಒಪ್ಪಿಕೊಂಡು ₹390 ಕೋಟಿಯನ್ನು ರಾಜ್ಯ ಸರಕಾರಕ್ಕೆ ಪಾವತಿಸಿದೆ. ಗಣಿಗಾರಿಕೆ ವಿರೋಧಿಸುವವರು ಇದನ್ನು ತಿಳಿದುಕೊಳ್ಳಬೇಕು.

ಅದಿರು ಮಾರಾಟಕ್ಕೆ ನಾನು ಸಹಿ ಹಾಕಿಲ್ಲ. 2005ರಲ್ಲಿ ಗಣಿಗಾರಿಕೆ ನಿಂತು ಹೋಗಿತ್ತು. ನಂತರ, ಅಲ್ಲಿ ಗುತ್ತಿಗೆ ಪಡೆದ ಕಂಪನಿ, ರಾಜ್ಯ ಹಾಗೂ ಕೇಂದ್ರ ಸರಕಾರದ ಜತೆ ಸಾಕಷ್ಟು ಪ್ರಕ್ರಿಯೆ ನಡೆಸಿತ್ತು. 2016ರಲ್ಲಿ ರಾಜ್ಯ ಸರಕಾರ ದೇವದಾರಿ ಅರಣ್ಯ ಪ್ರದೇಶದಲ್ಲಿ 404 ಹೆಕ್ಟೇರ್‌ ಪ್ರದೇಶದಲ್ಲಿ ಅದಿರು ಉತ್ಪಾದನೆ ಮಾಡುವ ಕುರಿತು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದರ ಮುಂದುವರಿದ ಭಾಗವಾಗಿ ಕೇಂದ್ರ ಸರ್ಕಾರ ಸಹಮತ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಉದ್ದೇಶಿತ ಗಣಿಗಾರಿಕೆ ಪ್ರದೇಶದಲ್ಲಿ 90 ಸಾವಿರ ಮರಗಳಿವೆ ಎನ್ನುವ ಸ್ಪಷ್ಟತೆಯೂ ಇಲ್ಲ. ಗಣಿಗಾರಿಕೆ 40-50 ವರ್ಷ ನಡೆಯುವ ನಿರಂತರ ಪ್ರಕ್ರಿಯೆಯಾಗಿರುವುದರಿಂದ ಹಂತ-ಹಂತವಾಗಿ ಮರ ಕಡಿಯಲಾಗುತ್ತದೆ. ಅದೇ ಸಮಯಕ್ಕೆ ಅರಣ್ಯೀಕರಣ ಸಹ ನಡೆಯುತ್ತದೆ ಎಂದು ಸಮರ್ಥಿಸಿಕೊಂಡರು.

ವಿಐಎಸ್ಸೆಲ್‌ಗೆ ಬಂಡವಾಳ ಹೂಡಿಕೆ ಕುರಿತು ಚರ್ಚೆ: ಎಚ್ಡಿಕೆ

ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವ ಸಂಬಂಧ ಮುಂದಿನ ೧೫ ದಿನಗಳಲ್ಲಿ ಮತ್ತೊಮ್ಮೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಕೇಂದ್ರ ಉಕ್ಕು ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾರ್ಮಿಕರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.ಬೆಂಗಳೂರಿನ ಕೆಐಓಸಿಎಲ್ ಕಚೇರಿಯಲ್ಲಿ ಮಂಗಳವಾರ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ನೇತೃತ್ವದ ಕಾರ್ಮಿಕ ನಿಯೋಗದೊಂದಿಗೆ ಸಭೆ ನಡೆಸಿದ ಉಕ್ಕು ಸಚಿವರು, ಕಾರ್ಖಾನೆಯ ಸ್ಥಿತಿಗತಿಗಳ ಕುರಿತು ನಿಯೋಗದಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.ಭಾರತೀಯ ಉಕ್ಕು ಪ್ರಾಧಿಕಾರ ಈ ಹಿಂದೆ ನಷ್ಟದಲ್ಲಿದ್ದ ಉತ್ತರ ಭಾರತದ ತನ್ನ ಕಾರ್ಖಾನೆಗಳಿಗೆ ಲಕ್ಷಾಂತರ ಕೋಟಿ ರು. ಬಂಡವಾಳ ತೊಡಗಿಸಿದ್ದು, ಈಗಾಗಲೇ ಆ ಕಾರ್ಖಾನೆಗಳು ಆಧುನೀಕರಣಗೊಂಡು ಪ್ರಸ್ತುತ ಲಾಭದಲ್ಲಿ ಮುನ್ನಡೆಯುತ್ತಿವೆ. ಆದರೆ ನಮ್ಮ ರಾಜ್ಯದ ವಿಐಎಸ್‌ಎಲ್ ಕಾರ್ಖಾನೆಗೆ ಮಾತ್ರ ಯಾವುದೇ ಬಂಡವಾಳ ತೊಡಗಿಸದೆ ನಷ್ಟದ ಹಾದಿ ಹಿಡಿಯುವಂತೆ ಮಾಡಿ ಇದೀಗ ಕಾರ್ಖಾನೆ ಮುಚ್ಚಲು ಹೊರಟಿದೆ ಎಂದು ನಿಯೋಗ ಆರೋಪಿಸಿತು.

ಈಗ ಮತ್ತೊಮ್ಮೆ ಸುಮಾರು ೧ ಲಕ್ಷ ಕೋಟಿ ರು. ಬಂಡವಾಳ ತೊಡಗಿಸುವ ಮೂಲಕ ಉತ್ತರ ಭಾರತದ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರ ಸಿದ್ಧತೆ ಕೈಗೊಂಡಿದ್ದು, ಈ ಬಂಡವಾಳದಲ್ಲಿ ವಿಐಎಸ್‌ಎಲ್ ಕಾರ್ಖಾನೆಗೂ ಹೆಚ್ಚಿನ ಪಾಲು ಸಿಗಬೇಕು ಹಾಗೂ ತಕ್ಷಣ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವ ಪ್ರಕ್ರಿಯೆಯಿಂದ ಕೈಬಿಟ್ಟು ಅಭಿವೃದ್ಧಿಪಡಿಸಿ ಮುನ್ನಡೆಸಿಕೊಂಡು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಮನವಿ ಮಾಡಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿ ಉಕ್ಕು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ೧೫ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಿ ಬಂಡವಾಳ ತೊಡಗಿಸಲು ಇರುವ ಮಾರ್ಗೋಪಾಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.ಕಾರ್ಖಾನೆಯ ಕಾರ್ಮಿಕರ ಸಂಘ, ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕಾರ್ಮಿಕ ಮುಖಂಡರು ಮತ್ತು ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು ನಿಯೋಗದಲ್ಲಿ ಪಾಲ್ಗೊಂಡಿದ್ದರು.

ಡಿ೧೮-ಬಿಡಿವಿಟಿ೨: ಬೆಂಗಳೂರಿನ ಕೆಐಓಸಿಎಲ್ ಕಚೇರಿಯಲ್ಲಿ ಮಂಗಳವಾರ ಜಾತ್ಯತೀತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಅವರ ನೇತೃತ್ವದ ವಿಐಎಸ್‌ಎಲ್ ಕಾರ್ಮಿಕ ನಿಯೋಗದೊಂದಿಗೆ ಮಂಗಳವಾರ ಕೇಂದ್ರ ಉಕ್ಕು ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಭೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ