ಆತ್ಮಕಲ್ಯಾಣಕ್ಕಾಗಿ ಇಂದ್ರಿಯ ನಿಗ್ರಹಿಗಳಾಗಿ: ಪಾಯಸಾಗರ ಮಹಾರಾಜ

KannadaprabhaNewsNetwork | Published : Feb 28, 2024 2:40 AM

ಸಾರಾಂಶ

ಜಾತಿಯಿಂದ ಜೈನ್‌ನಾಗುವ ಬದಲು ನೀತಿಯಿಂದ ಜೈನರಾದಾಗ ಮಾತ್ರ ಮನುಜ ಕುಲವೆಲ್ಲವೂ ಮೋಕ್ಷದ ಪಥದಲ್ಲಿ ಮುನ್ನುಗ್ಗಲು ಸಾಧ್ಯ.

ವಿದ್ಯಾಸಾಗರ್‌ ಮುನಿಮಹಾರಾಜರ ವಿನಿಯಾಂಜಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಅಂಧಕಾರದ ಆಚರಣೆ ಬದಲು ಆತ್ಮಕಲ್ಯಾಣಕ್ಕಾಗಿ ಇಂದ್ರಿಯ ನಿಗ್ರಹಿಗಳಾಗಿ ನಿತ್ಯ ನಿಯಮಾವಳಿ ಪಾಲಿಸಿ, ಜಾತಿಯಿಂದ ಜೈನ್‌ನಾಗುವ ಬದಲು ನೀತಿಯಿಂದ ಜೈನರಾದಾಗ ಮಾತ್ರ ಮನುಜ ಕುಲವೆಲ್ಲವೂ ಮೋಕ್ಷದ ಪಥದಲ್ಲಿ ಮುನ್ನುಗ್ಗಲು ಸಾಧ್ಯ ಎಂದು ಪಾಯಸಾಗರ ಮಹಾರಾಜರು ಹೇಳಿದರು.

ತಾಲೂಕಿನ ಬನ್ನೂರು ಗ್ರಾಮದಲ್ಲಿ ಭಗವಾನ್‌ ಮಹಾವೀರ್‌ ದಿಗಂಬರ್‌ ಜಿನಮಂದಿರ ಸಮಿತಿ ಗ್ರಾಮದ ಜಿನಮಂದಿರದಲ್ಲಿ ಏರ್ಪಡಿಸಿದ್ದ ಆಚಾರ್ಯ ವಿದ್ಯಾಸಾಗರ್‌ ಮುನಿಮಹಾರಾಜರ ವಿನಿಯಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪಂಚ ಕಾಲ ಕಂಡರಿಯದ ಸಂತ, ಸಂತ ಶಿರೋಮಣಿ, ರಾಷ್ಟ್ರಸಂತರಾದ ವಿದ್ಯಾಸಾಗರರು ಭೌತಿಕವಾಗಿ ನಮ್ಮನ್ನಗಲಿದರೂ ಅವರು ಹಾಕಿ ಕೊಟ್ಟ ಧಾರ್ಮಿಕ ದಾರಿಯೇ ನಮ್ಮೆಲ್ಲರ ಬಾಳಿಗೆ ದೀವಿಗೆಯಂತೆ ಪ್ರಜ್ವಲಿಸುತ್ತಿದೆ. ಅಂತಹ ಮಹಾನ್‌ ಚೇತನರು ನನ್ನ ದೀಕ್ಷಾ ಮತ್ತು ಶಿಕ್ಷಾ ಗುರುಗಳಾಗಿದ್ದು,ನನ್ನ ಸೌಭಾಗ್ಯವೇ ಸರಿ ಎಂದರು.

ಆಚಾರ್ಯ ಶ್ರೀಗಳ ಬಗ್ಗೆ ವರ್ಣನೆ ಮಾಡಲು ನಿಂತರೆ, ಇಡೀ ಪೃಥ್ವಿ ಕಾಗದವನ್ನಾಗಿ ಮಾಡಿ, ಸಪ್ತಸಾಗರಗಳ ನೀರನ್ನೆಲ್ಲ ಶಾಹಿಯಾಗಿ ಬಳಸಿದರೂ, ಮುಗಿಯದ ಮಹಾನ್ ಕಾವ್ಯದಂತಿದೆ, ಅಖಂಡ ತೇಜೋಮಯಿಗಳಾಗಿದ್ದ ಗುರುವರ್ಯರನ್ನು ಕಳೆದುಕೊಂಡ ಪ್ರಪಂಚದ ನನ್ನಂತಹ ಅನೇಕರ ಜೀವನ, ದಿಕ್ಸೂಚಿ ಇಲ್ಲದ ನಾವೆಯಂತಾಗಿದೆ, ಬಾಹ್ಯ ಸುಖಕ್ಕೋಸ್ಕರ ಈಗಿನ ದಿಕ್ಕು ತಪ್ಪಿದ ಯುವ ಜನತೆಗೆ, ಅವರ ಜೀವನ ಕ್ರಮವೇ ದಿಕ್ಸೂಚಿಯಾಗಲಿ, ಜೀವನ ಶೈಲಿಯೇ ಪ್ರಾಣವಾಯುವಾಗಿ ಪಸರಿಸಲಿ, ಸಾಸಿವೆ ಎಷ್ಟಾದರೂ ಅವರ ತಪ್ಪಾದರ್ಶಿಗಳನ್ನು ನಮ್ಮಲ್ಲಿ ಅಳವಡಿಸಿ ಕೊಂಡಾಗ ಮಾತ್ರ, ವಿಶ್ವವಂದನೀಯ, ಯುಗ ಪ್ರವರ್ಥಕ ವಿದ್ಯಾಸಾಗರರ ಇಂತಹ ವಿನಿಯಾಂಜಲಿ ಕಾರ್ಯಕ್ರಮಗಳಿಗೆ ವಿಶೇಷ ಅರ್ಥ ಬರಲು ಸಾಧ್ಯ, ಆದ್ದರಿಂದ ಸಾಧ್ಯವಾದಷ್ಟು ಇಂದ್ರಿಯಗಳ ನಿಗ್ರಹಿಗಳಾಗಿ, ಜೈನ ಧರ್ಮದ ತತ್ವದರ್ಶ ರೂಢಿಸಿಕೊಂಡು, ಆಚಾರ್ಯ ಭಗವಂತರು ಹಾಕಿಕೊಟ್ಟಂತಹ ಸನ್ಮಾರ್ಗದಲ್ಲಿ ಸಾಗಿ, ಭವ್ಯ ಭಾರತದ ಭಾವಿ ಪ್ರಜೆಗಳಾಗಿ ಬದುಕು ನಡೆಸಿ ಎಂದರು.

ಕಾರ್ಯಕ್ರಮದಲ್ಲಿ ಜಿನಮಂದಿರ ಸೇವಾ ಸಮಿತಿಯ ಅಧ್ಯಕ್ಷರು,ಉಪಾಧ್ಯಕ್ಷರು ಸರ್ವ ಸದಸ್ಯರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಗ್ರಾಮದ ಶ್ರಾವಕ ಶ್ರಾವಿಕೆಯರೆಲ್ಲರೂ ಪಾಲ್ಗೊಂಡು ಆಚಾರ್ಯ ಶ್ರೀಗಳ ಭಾವಚಿತ್ರಕ್ಕೆ ದೀಪಾರತಿಯೊಂದಿಗೆ ಮಹಾಮಂತ್ರ ಪಠಿಸಿ,ವಿನಯಾಂಜಲಿ ಅರ್ಪಿಸಿದರು.

Share this article