ಬೆಳೆನಷ್ಟಾತು, ಮಿನಿಸ್ಟ್ರು ಹತ್ರ ನೆರವು ಕೇಳಾಣಾಂತ ಬಂದೀವಿ

KannadaprabhaNewsNetwork | Published : Oct 27, 2023 12:30 AM

ಸಾರಾಂಶ

ಬರದಿಂದ ಬದುಕು ನಿರ್ವಹಣೆಯ ಕಷ್ಟಗಳ ಕುರಿತು "ಕನ್ನಡಪ್ರಭ'' ಜತೆ ಅಳಲು ತೋಡಿಕೊಂಡರು.
ಕನ್ನಡಪ್ರಭವಾರ್ತೆ ಬಳ್ಳಾರಿ "ಈ ಸಾರಿ ಮಳೆ ಹೋಯ್ತು. ಬೆಳೆನೂ ಇಲ್ಲ. ಭಾಳ ಕಷ್ಟದಾಗ ಅದೀವಿ. ಮಿನಿಸ್ಟ್ರು ಹತ್ರ ನೆರವು ಕೇಳಾನ ಅಂತ ಬಂದೀವಿ..'''' ತಾಲೂಕಿನ ಮೋಕಾ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ "ಜನತಾ ದರ್ಶನ''''ದಲ್ಲಿ ಪಾಲ್ಗೊಂಡಿದ್ದ ಭೈರದೇವನಹಳ್ಳಿಯ ತಿಪ್ಪಮ್ಮ, ಓಬಳಮ್ಮ, ಸಾದಮ್ಮ, ಗಂಗಮ್ಮ ಹಾಗೂ ಕಮಲಮ್ಮ ಅವರು ಬರದಿಂದ ಬದುಕು ನಿರ್ವಹಣೆಯ ಕಷ್ಟಗಳ ಕುರಿತು "ಕನ್ನಡಪ್ರಭ'''' ಜತೆ ಅಳಲು ತೋಡಿಕೊಂಡರು. `ನಾವು ಮಳೆಯನ್ನೇ ನಂಬಿಕೊಂಡು ಬದುಕು ನಡೆಸೋರು. ಈ ಬಾರಿ ಮಳೆ ಹೋಯ್ತು. ಬೆಳೆ ಇಲ್ದಂಗಾತು. ಏನ್ ಮಾಡೋದು ಗೊತ್ತಾಗುತ್ತಿಲ್ಲ. ಹಿಂಗಾಗಿ ನಾಗೇಂದ್ರ ಸರ್ ಬರ‍್ತಾನ ಅಂತ ಹೇಳಿದ್ರು. ಅದ್ಕೆ ಅವರನ್ನು ಭೇಟಿ ಮಾಡಿ ರೈತರಿಗೆ ಸಹಾಯ ಮಾಡಿ ಎಂದು ಕೇಳೋಕ ಬಂದೀವಿ'''''''' ಎಂದರು. ಹೊಲ ನೋಡಿದ್ರೆ ಸಂಕಷ್ಟ ಆಗ್ತೈತೆ: ನಮ್ದು ಐದು ಎಕರೆ ಹೊಲ ಐತೆ. ಮೆಣಸಿನಕಾಯಿ, ಜೋಳ, ತೊಗರಿ ಹಾಕಿದ್ವಿ. ಕಾಲುವೆಯಲ್ಲಿ ನೀರು ಬಂದ್ ಆಗೈತೆ. ಮಳೆಯಿಲ್ಲದೆ ಎಲ್ಲ ಬೆಳೆ ಹಾಳಾಗೈತೆ. ಹೊಲ ನೋಡಿದ್ರೆ ಸಂಕಷ್ಟ ಆಗ್ತೈತೆ. ನಮ್ ಕಷ್ಟ ಹೇಳಿಕೊಳ್ಳೋಣಾಂತ ಬಂದ್ವಿ ಎಂದು ತಿಳಿಸಿದ ಭೈರದೇವನಹಳ್ಳಿಯ ರೈತ ರೈತ ಮಹಿಳೆ ತಿಮ್ಮಪ್ಪ ಅವರು ಜಿಲ್ಲಾ ಸಚಿವರು "ಜನತಾ ದರ್ಶನ''''ಕ್ಕೆ ಬರುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಮಂಕಾದರು. ನಮ್ಮೂರಿಂದ ಇಪ್ಪತ್ತು ಜನ ಮಹಿಳೆಯರು ಬಂದೀವಿ. ರೈತರು ಭಾಳ ಕಷ್ಟದಲ್ಲಿದ್ದಾರ. ಬೆಳೆ ಪರಿಹಾರ ಬೇಗ ಕೊಡಿಸಿ. ಇಲ್ಲಾಂದ್ರೆ ರೈತರು ಜೀವನ ಮಾಡೋದು ಕಷ್ಟ ಆಗ್ತೈತೆ ಎಂದು ಕೇಳೋಣಾಂತ ಬಂದೀವಿ. ಮಿನಿಸ್ಟ್ರು ಸಾರ್ ಇದ್ದಿದ್ರೆ ಎಲ್ಲ ಹೇಳ್ಕೊಳ್ತಾ ಇದ್ವಿ. ಆದ್ರೆ, ಏನ್ ಮಾಡೋದು ಅವರೇ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಲೋಕಮ್ಮ ಹಾಗೂ ವಿಶಾಲಮ್ಮ ಅವರು ಡಿಸಿ ಸಾಹೇಬ್ರಿಗೆ ಕಷ್ಟ ಹೇಳಿ ಹೋಗ್ತೀವಿ ಎಂದರು.

Share this article