ಕೊಟ್ಟೂರು: ಚುನಾವಣೆ ನೀತಿ ಸಮಿತಿ ಮುಗಿದ ಕೂಡಲೇ ಕೊಟ್ಟೂರು ಪಟ್ಟಣ ಮತ್ತು ತಾಲೂಕಿನಲ್ಲಿ ಹಮ್ಮಿಕೊಂಡಿರುವ ಭರಪೂರದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಸರ್ಕಾರದ ಅನುದಾನ ಇಲ್ಲದೆಯೂ ಪರ್ಯಾಯ ಮೂಲಗಳ ಮೂಲಕ ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ಬಸ್ ನಿಲ್ದಾಣವನ್ನು ಪುನರ್ ಅಭಿವೃದ್ಧಿ ಪಡಿಸುವ ₹3.50 ಕೋಟಿ ವೆಚ್ಚದಲ್ಲಿ ಕೆಕೆಆರ್‌ಟಿಸಿ ಮತ್ತು ಡೆಲ್ಟಾ ಅನುದಾನದಡಿ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಕೆಲ ದಿನಗಳಲ್ಲಿ ಇದರ ಕಾಮಗಾರಿ ನಡೆದು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಕೊಟ್ಟೂರಿನಲ್ಲಿ ಮುಂಬರುವ ವರ್ಷದೊಳಗೆ ಹಲವು ಬಗೆಯ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಬಸ್ ನಿಲ್ದಾಣದ ಜೊತೆಗೆ ಬಸ್ ಡಿಪೋವನ್ನು ಪಟ್ಟಣದ ಹೊರ ಹೊಲಯದಲ್ಲಿ ನಿರ್ಮಿಸಲೆಂದೇ ಜಮೀನು ಪರಿಶೀಲಿಸುವ ಕಾರ್ಯ ನಡೆದಿದೆ ಎಂದು ಅವರು ಹೇಳಿದರು.ಹಾಲಿ ಇರುವ ಬಸ್‌ನಿಲ್ದಾಣದ ಬಳಿ ಬೃಹತ್ ಕಾಲುವೆ ಮಳೆ ನೀರಿನಿಂದ ತುಂಬಿ ಮುಂದೆ ಹರಿಯದಂತಾಗಲು ಚರಂಡಿ ತುಂಬೆಲ್ಲ ಪ್ಲಾಸ್ಟಿಕ್ ಮತ್ತಿತರರ ಸಾಮಾನುಗಳನ್ನು ಅಂಗಡಿಗಳವರು ಹಾಕುತ್ತಿರುವುದು ಸರಿಯಲ್ಲ. ಕೂಡಲೇ ಪಪಂ ಆಡಳಿತ ಈ ಸಂಬಂಧ ಅಂಗಡಿಯವರಿಗೆ ನೊಟೀಸ್ ಜಾರಿಗೊಳಿಸಿ ಚರಂಡಿ ಸ್ವಚ್ಛಗೊಳಿಸಲು ಮುಂದಾಗಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.