ಆಸಂದಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ₹12 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಆಸಂದಿ ಗ್ರಾಪಂ ಹಾಗೂ ಆಸಂದಿ ಗ್ರಾಮದ ಅಭಿವೃದ್ಧಿಗೆ ಶಾಸಕ ಕೆ.ಎಸ್.ಆನಂದ್ ಅನುದಾನ ನೀಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಆಸಂದಿ ಕಲ್ಲೇಶ್ ಹೇಳಿದರು.
ಆಸಂದಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ₹12 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದರು. ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ವರ್ಗಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಕೆ.ಸ್ ಆನಂದ್ ಆಸಂದಿ ಗ್ರಾಮದ ದೇವಾಲಯಗಳು, ರಸ್ತೆ, ಚರಂಡಿ ದುರಸ್ತಿ, ಶಾಲೆ ಅಭಿವೃದ್ಧಿಗೆ ಅನುದಾನ ನೀಡಿದ್ದು, ಗ್ರಾಮದ ಮುಖ್ಯ ರಸ್ತೆಯಿಂದ ಶ್ರೀ ಬೀರಲಿಂಗೇಶ್ವರ ದೇವಾಲಯದ ತನಕ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಕೆಲಸ ಆರಂಭಿಸಲಾಗಿದೆ ಎಂದರು.ಗ್ರಾಮೀಣ ಭಾಗದ ಬಡವರಿಗೆ ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಸದೃಢವಾಗುವಂತೆ ಮಾಡಿದೆ ಅದರಲ್ಲಿಯೂ ಮಹಿಳೆಯರಿಗೆ ಈ ಯೋಜನೆ ಕುಟುಂಬ ನಿರ್ವಹಣೆಗೆ ಸಾಕಷ್ಟು ಸಹಾಯವಾಗಿದೆ ಎಂದು ನೂರಾರು ಮಹಿಳೆಯರು ಹೇಳಿಕೊಂಡಿರುವುದು ಕಾಂಗ್ರೆಸ್ ಪಕ್ಷದ ಸಾಧನೆಯಲ್ಲವೇ ಎಂದರು.ವಿರೋಧ ಪಕ್ಷಗಳು ಎಷ್ಟೇ ದೂರಿದರೂ ಸಿದ್ದರಾಮಯ್ಯ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ . ಈ ಬಗ್ಗೆ ಭಯ, ಆತಂಕ ಬೇಡ ಗಾಳಿ ಸುದ್ದಿಗಳಿಗೆ ಕಿವಿ ಗೊಡಬೇಡಿ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ವಸಂತಮ್ಮ ಗೋವಿಂದಪ್ಪ, ಉಪಾಧ್ಯಕ್ಷೆ ಕರಿಯಮ್ಮ ಮಂಜುನಾಥ್, ಸದಸ್ಯರಾದ ಕೃಷ್ಣಯ್ಯ, ವಿಎಸ್‍ಎಸ್‍ಎನ್‍ನ ವೆಂಕಟೇಶ್, ರಾಜಪ್ಪ, ಶೇಖರಪ್ಪ, ಸಂತೋಷ್ ಮತ್ತು ಗ್ರಾಮಸ್ಥರು ಇದ್ದರು.24ಕೆಕೆಡಿಯು1.ಕಡೂರು ತಾಲೂಕು ಆಸಂದಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ಭೂಮಿ ಪೂಜೆ ನೆರವೇರಿಸಿದರು.