ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಆರಂಭ

KannadaprabhaNewsNetwork |  
Published : Aug 13, 2025, 12:30 AM IST
4 | Kannada Prabha

ಸಾರಾಂಶ

ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 10 ಸಾವಿರ ರು. ಕಡ್ಡಾಯವಾಗಿ ನಿಗದಿಯಾಗಬೇಕು. ಬಿಸಿಯೂಟ ಕಾರ್ಯಕರ್ತೆರಿಗೆ ನೀಡಿದ 1 ಸಾವಿರ ರು. ಪ್ರೋತ್ಸಾಹ ಧನವನ್ನು ಆಶಾ ಕಾರ್ಯಕರ್ತೆಯರಿಗೂ ನೀಡಬೇಕು. ತರ್ಕಬದ್ದಗೊಳಿಸಿ ಆಶಾ ಕಾರ್ಯರ್ತೆಯರ ಸಂಖ್ಯೆಯನ್ನು ಕಡಿತಗೊಳಿಸಬಾರದು, ಅವೈಜ್ಞಾನಿಕ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರೋತ್ಸಾಹ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ ಸಂಯೋಜಿತ) ಜಿಲ್ಲಾ ಸಮಿತಿಯವರು ನಗರ ಗಾಂಧಿ ಚೌಕದಲ್ಲಿ ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದರು.

ಪ್ರತಿ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ವೇತನವನ್ನು ಕ್ರೋಢಿಕರಿಸಿ 10 ಸಾವಿರ ರು. ನಿಗದಿ ಮಾಡಿ, ಬಜೆಟ್‌ ನಲ್ಲಿ ವಿಶಿಷ್ಟ ಯೋಜನೆಯನ್ನು ಏಪ್ರಿಲ್‌ ನಲ್ಲಿ ನೀಡುವುದಾಗಿ ರಾಜ್ಯ ಸರ್ಕಾರವು ಭರವಸೆ ನೀಡಿದ್ದು, ಈವರೆಗೂ ಯಾವುದೇ ಆದೇಶ, ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 10 ಸಾವಿರ ರು. ಕಡ್ಡಾಯವಾಗಿ ನಿಗದಿಯಾಗಬೇಕು. ಬಿಸಿಯೂಟ ಕಾರ್ಯಕರ್ತೆರಿಗೆ ನೀಡಿದ 1 ಸಾವಿರ ರು. ಪ್ರೋತ್ಸಾಹ ಧನವನ್ನು ಆಶಾ ಕಾರ್ಯಕರ್ತೆಯರಿಗೂ ನೀಡಬೇಕು. ತರ್ಕಬದ್ದಗೊಳಿಸಿ ಆಶಾ ಕಾರ್ಯರ್ತೆಯರ ಸಂಖ್ಯೆಯನ್ನು ಕಡಿತಗೊಳಿಸಬಾರದು, ಅವೈಜ್ಞಾನಿಕ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

20 ಆಶಾ ಕಾರ್ಯಕರ್ತರಿಗೆ ಒಬ್ಬರಂತೆ ಒಟ್ಟು 2 ಸಾವಿರ ಸುಗಮಕಾರರನ್ನು ನೇಮಿಸಿ, ನಂತರ ಅವರನ್ನು ದಿಢೀರನೆ ತೆಗೆದು ಹಾಕಿದ್ದಾರೆ. ಈ ನಿರ್ಧಾರ ಕೈಬಿಡಬೇಕು. 60 ವರ್ಷ ವಯಸ್ಸಿನ ಆಶಾ ಕಾರ್ಯಕರ್ತೆಯರನ್ನು ಕೈಬಿಟ್ಟು ಅವರಿಗೆ ನಿವೃತ್ತಿ ಘೋಷಿಸಿದ್ದಾರೆ. 17 ವರ್ಷದಿಂದ ಕೆಲಸ ಮಾಡುತ್ತಿರುವ ಅವರಿಗೆ ಕೂಡಲೇ ಪರಿಹಾರ ಘೋಷಿಸಬೇಕು. ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿ ಹೆಚ್ಚಿಸುವುದು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

2025ರ ಜೂನ್- ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ನಗರ ಆಶಾಗಳಿಗೆ 2 ಸಾವಿರ ಗೌರವಧನ ಹೆಚ್ಚಿಸಬೇಕು. ನಿವೃತ್ತರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಭಾಗ್ಯ, ನಗರಾಧ್ಯಕ್ಷೆ ಮಣಿಲಾ, ಜಿಲ್ಲಾ ಸಲಹೆಗಾರರಾದ ಜಿ.ಎಸ್. ಸೀಮಾ, ಪದಾಧಿಕಾರಿಗಳಾದ ಮಂಜುಳಾ, ಕೋಮಲಾ, ಪಿ.ಎಸ್. ಸಂಧ್ಯಾ, ಪವಿತ್ರಾ, ರೇಣುಕಾ, ಶಾಂತಮ್ಮ, ಮಂಗಳಮ್ಮ, ಸುಧಾ, ಸವಿತಾ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಮೊದಲಾದವರು ಇದ್ದರು.

ಪೌರಕಾರ್ಮಿಕರಿಗೆ ನಿವೇಶನ ನೀಡಿ ಮನೆ ನಿರ್ಮಿಸಿ ಕೊಡಲು ಆಗ್ರಹ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕಿನ ಕಡಕೊಳ, ಶ್ರೀರಾಂಪುರ, ಬೋಗಾದಿ ಪಟ್ಟಣ ಪಂಚಾಯಿತಿ, ಇಲವಾಲ ಹಾಗೂ ಸಿದ್ದಲಿಂಗಪುರ ಗ್ರಾಪಂಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಪೌರಕಾರ್ಮಿಕರಿಗೆ ನಿವೇಶನ ನೀಡಿ, ಮನೆ ನಿರ್ಮಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ರಾಜು ಆಗ್ರಹಿಸಿದರು.

ಪೌರಕಾರ್ಮಿಕರು, ಸ್ವಚ್ಛತಾ ವಾಹನ ಚಾಲಕರು, ಲೋಡರ್ಸ್, ಮ್ಯಾನ್ಯುವಲ್ ಸ್ಕಾವೆಂಜರ್ಸ್ ಗಳು ಬೆಳಗ್ಗೆ ಸ್ವಚ್ಛತಾ ಕೆಲಸಕ್ಕೆ ಹೋದರೆ ಬರುವುದು ಸಂಜೆ ಆಗುತ್ತದೆ. ಇವರಿಗೆ ನಿವೇಶನ ನೀಡಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ 2023ನೇ ಸಾಲಿನಲ್ಲಿ ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕಗೊಂಡು ಎರಡು ವರ್ಷ ಕಳೆದು ಪ್ರೊಬೇಷನರಿ ಅವಧಿ ಪೂರೈಸಿರುವವರಿಗೆ ಪ್ರಮಾಣಪತ್ರ ನೀಡಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಡಕೊಳ ಪಟ್ಟಣ ಪಂಚಾಯಿತಿ ಸ್ವಚ್ಛತಾ ಪೌರಕಾರ್ಮಿಕರಿಗೆ ಬ್ಯಾತಹಳ್ಳಿ ಗ್ರಾಮದಲ್ಲಿ, ಶ್ರೀರಾಂಪುರ ಪಪಂ ಗುರೂರು ಅಥವಾ ಪಾಲಿಕೆಯ ಜಾಗ, ಬೋಗಾದಿ ಪಪಂ ಪೌರಕಾರ್ಮಿಕರಿಗೆ ಇಲವಾಲ ಹೋಬಳಿ ಮಾದಹಳ್ಳಿಯಲ್ಲಿ, ಇಲವಾಲ ಗ್ರಾಪಂ ಸ್ವಚ್ಛತಾ ಕಾರ್ಮಿಕರಿಗೂ ಇದೇ ಸ್ಥಳದಲ್ಲಿ, ಸಿದ್ದಲಿಂಗಪುರ ಗ್ರಾಪಂ ಸ್ವಚ್ಛತಾ ಕಾರ್ಮಿಕರಿಗೆ ಕೆಸರೆಯಲ್ಲಿ, ಟಿ. ನರಸೀಪುರ ಪುರಸಭೆ ಪೌರಕಾರ್ಮಿಕರಿಗೆ ಬಂಗಾರಪ್ಪ ಬಡಾವಣೆಯಲ್ಲಿ ನಿವೇಶನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಚಯ್ಯ, ಪದಾಧಿಕಾರಿಗಳಾದ ಕೆ. ನಂಜಪ್ಪ, ಪವಿತ್ರಾ, ಮಂಜುನಾಥ್, ವಸಂತಕುಮಾರ್, ಆರ್. ಅಂಜಲಿ ಮೊದಲಾದವರು ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!