ಕನ್ನಡಪ್ರಭ ವಾರ್ತೆ ಮಂಡ್ಯ
ಧರಣಿ ವೇಳೆ ಆಶಾ ಕಾರ್ಯಕರ್ತೆಯರು, ಈ ವರ್ಷದ ಬಜೆಟ್‌ನಲ್ಲಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದಂತೆ ಒಂದು ಸಾವಿರ ರು. ಹೆಚ್ಚಳದ ಆದೇಶವನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ, ಆರೋಗ್ಯ ಸೇವೆಗಳನ್ನು ಪಡೆಯಲು ಕಷ್ಟಪಡುವ ಗ್ರಾಮೀಣ ಜನತೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾವುದೇ ಆರೋಗ್ಯ ಸಂಬಂಧಿಸಿದ ಬೇಡಿಕೆಗಳಿಗೆ ಮೊದಲ ಕರೆ ನಮಗೇ ಬರುತ್ತವೆ. ಜನತೆ ಮತ್ತು ಸರ್ಕಾರದ ನಿರೀಕ್ಷೆಯಂತೆ ಹಗಲು- ರಾತ್ರಿ ಶ್ರಮಿಸುತ್ತಿದ್ದೇವೆ. ನಮ್ಮ ಸೇವೆಗೆ ಸಮುದಾಯದಿಂದ ಗೌರವಾಧಾರಗಳು ಇವೆಯಾದರೂ, ಸರ್ಕಾರಗಳು ಮಾತ್ರ ಸೇವೆಗೆ ತಕ್ಕ ಪ್ರತಿಫಲ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ, ಕಳೆದ ಜನವರಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಈ ವರ್ಷದ ಬಜೆಟ್‌ನಲ್ಲಿ ಎಲ್ಲ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ, ಇದುವರೆಗೂ ಅದು ಜಾರಿಗೆ ಬಂದಿಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ 10 ಸಾವಿರ ರು.ಗಳನ್ನು ಈ ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಿ. ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ.ಪುಷ್ಪಾವತಿ, ಕಾರ್ಯದರ್ಶಿ ಕೆ.ವಿ.ಜ್ಯೋತಿ, ಮಂಜುಳ, ರಾಣಿ, ರೇಣುಕಾ, ಪ್ರಭಾವತಿ, ಕೋಮಲ, ಜ್ಯೋತಿ, ತಾರಾ, ಆಶಾರಾಣಿ, ರಶ್ಮಿ, ಮಂಜಮ್ಮ, ಇಂದ್ರಮ್ಮ, ಪಲ್ಲವಿ, ಕವಿತಾ, ಪವಿತ್ರ, ದಾಕ್ಷಾಯಿಣಿ, ರಾಜಮಣಿ, ಲಕ್ಷ್ಮೀ ಸೇರಿ ನೂರಾರು ಮಂದಿ ಭಾಗವಹಿಸಿದ್ದರು.