ದಸರಾ ಗಜಪಡೆಯ ‘ನಡಿಗೆ’ ತಾಲೀಮು ಆರಂಭ

KannadaprabhaNewsNetwork |  
Published : Aug 13, 2025, 12:30 AM IST
000000 | Kannada Prabha

ಸಾರಾಂಶ

ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯು ಮಂಗಳವಾರದಿಂದ ಅಧಿಕೃತವಾಗಿ ನಡಿಗೆ ತಾಲೀಮು ಆರಂಭಿಸಿದವು. ವಿಶ್ವ ಆನೆ ದಿನಾಚರಣೆಯಂದೇ ದಸರಾ ಆನೆಗಳು ತಾಲೀಮು ಆರಂಭಿಸಿದ್ದು ಈ ಬಾರಿಯ ವಿಶೇಷವಾಗಿತ್ತು.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯು ಮಂಗಳವಾರದಿಂದ ಅಧಿಕೃತವಾಗಿ ನಡಿಗೆ ತಾಲೀಮು ಆರಂಭಿಸಿದವು. ವಿಶ್ವ ಆನೆ ದಿನಾಚರಣೆಯಂದೇ ದಸರಾ ಆನೆಗಳು ತಾಲೀಮು ಆರಂಭಿಸಿದ್ದು ಈ ಬಾರಿಯ ವಿಶೇಷವಾಗಿತ್ತು.

ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ನಡೆದ ತಾಲೀಮಿನಲ್ಲಿ ಪ್ರಶಾಂತ, ಭೀಮ, ಧನಂಜಯ, ಮಹೇಂದ್ರ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ ಆನೆಗಳು ಪಾಲ್ಗೊಂಡಿದ್ದವು.

ಮೈಸೂರು ಅರಮನೆ ಆವರಣದ ಆನೆ ಬಿಡಾರದಿಂದ ಹೊರಟ 9 ಆನೆಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆರ್ ಎಂಸಿ ವೃತ್ತದವರೆಗೆ ಸಾಗಿ ಮತ್ತೆ ಅದೇ ಮಾರ್ಗದಲ್ಲಿ ಅರಮನೆಗೆ ವಾಪಸ್ ಆದವು.

ಮುಗಿಬಿದ್ದ ಜನ:

ದಸರಾ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಜನ ಜಂಗುಳಿ, ವಾಹನಗಳ ಓಡಾಟ ಹಾಗೂ ನಗರದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಆನೆಗಳಿಗೆ ಈ ತಾಲೀಮು ನಡೆಸಲಾಗುತ್ತಿದೆ. ರಸ್ತೆಯಲ್ಲಿ ಆನೆಗಳ ವಾಕಿಂಗ್ ನೋಡಲು ಮುಗಿಬಿದ್ದ ಜನ, ಆನೆಗಳ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಆನೆಗಳ ಹತ್ತಿರ ಬರಲು ಯತ್ನಿಸಿದ ಜನರನ್ನು ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ನಿಯಂತ್ರಿಸಿದರು.

ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ದಸರಾ ಗಜಪಡೆಗೆ ತಾಲೀಮು ಆರಂಭಿಸಿದ್ದೇವೆ. ಎಲ್ಲಾ ಆನೆಗಳು ಕೂಡ ಆರೋಗ್ಯದಿಂದ ಇವೆ. ಈಗಾಗಲೇ ವೈದ್ಯರು ಎಲ್ಲಾ ರೀತಿಯ ತಪಾಸಣೆ ಮಾಡಿದ್ದಾರೆ. ಮೊದಲ ದಿನ ಆರ್ ಎಂಸಿ ವೃತ್ತದವರೆಗೆ ಆನೆಗಳು ತಾಲೀಮು ನಡೆಸಿವೆ. ಮುಂದಿನ ದಿನಗಳಲ್ಲಿ ವಿವಿಧ ರೀತಿಯ ತಾಲೀಮು ನಡೆಸಲಾಗುವುದು.

- ಡಾ.ಐ.ಬಿ.ಪ್ರಭುಗೌಡ‌, ಡಿಸಿಎಫ್

ವಿಶೇಷಚೇತನ ಮಕ್ಕಳೊಂದಿಗೆ ವಿಶ್ವ ಆನೆ ದಿನಾಚರಣೆ

ಕನ್ನಡಪ್ರಭ ವಾರ್ತೆ ಮೈಸೂರು

ವಿಶೇಷಚೇತನ ಹಾಗೂ ಅನಾಥಾಶ್ರಮದ ಮಕ್ಕಳಿಗೆ ದಸರಾ ಆನೆಗಳನ್ನು ತೋರಿಸಿ, ಅವುಗಳ ವಿಶೇಷತೆಗಳನ್ನು ವಿವರಿಸುವ ಮೂಲಕ ಅರಣ್ಯ ಇಲಾಖೆಯವರು ವಿಭಿನ್ನವಾಗಿ ಮಂಗಳವಾರ ವಿಶ್ವ ಆನೆ ದಿನವನ್ನು ಆಚರಿಸಿತು.

ದಸರಾ ಗಜಪಡೆಯನ್ನು ಕಣ್ತುಂಬಿಕೊಂಡು ವಿಶೇಷಚೇತನ ಮಕ್ಕಳು ಸಂಭ್ರಮಿಸಿದರು. ಭೀಮ ಆನೆಯ ಬಳಿಗೆ ಮಕ್ಕಳನ್ನು ಕರೆತಂದು ಆನೆಗಳ ಬಗ್ಗೆ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾಹಿತಿ ನೀಡಿದರು. ಬಲಶಾಲಿ ಭೀಮನನ್ನು ಹತ್ತಿರದಿಂದ ನೋಡಿ ಖುಷಿಪಟ್ಟ ಮಕ್ಕಳು, ಭೀಮ ಆನೆಯನ್ನು ಮುಟ್ಟಿ, ಕಬ್ಬು ತಿನ್ನಿಸಿ ಸಂತಸಪಟ್ಟರು.

ಅಂಬಾರಿ ಆನೆ ಅಭಿಮನ್ಯು ಸೇರಿದಂತೆ 9 ಆನೆಗಳನ್ನು ನೋಡಿದ ಮಕ್ಕಳು ಖುಷಿಯಲ್ಲಿ ಓಡುತ್ತಿದ್ದರು.

ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಆನೆ ಮಾವುತರು, ಕಾವಾಡಿಗಳು ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ