ಗೌರವಧನ ಹೆಚ್ಚಿಸದೆ ಆಶಾ ಕಾರ್ಯಕರ್ತೆಯರಿಗೆ ವಂಚನೆ: ಶರಣು ಗಡ್ಡಿ

KannadaprabhaNewsNetwork |  
Published : Mar 01, 2026, 02:45 AM IST
ಕೊಪ್ಪಳ ನಗರದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆ ಈಡೇರಿಸುವಂತೆ ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೊಪ್ಪಳ ನಗರದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಕೊಪ್ಪಳ: ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆ ಈಡೇರಿಸುವಂತೆ ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಈಶ್ವರ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಶರಣು ಗಡ್ಡಿ, 2025ರ ಜನವರಿಯಲ್ಲಿ ನಡೆದ ಅಹೋರಾತ್ರಿ ಹೋರಾಟದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಗೌರವಧನ ಹೆಚ್ಚಳ ಹಾಗೂ ಮಾಸಿಕ ಕನಿಷ್ಠ ₹10 ಸಾವಿರ ಗ್ಯಾರಂಟಿ ಭರವಸೆ ನೀಡಿದ್ದರು. 14 ತಿಂಗಳು ಕಳೆದರೂ ಭರವಸೆ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗೌರವಧನ ₹8 ಸಾವಿರಕ್ಕೆ ಹೆಚ್ಚಿಸುವುದನ್ನೂ ಸರ್ಕಾರ ಜಾರಿಗೆ ತರದೆ ಆಶಾ ಕಾರ್ಯಕರ್ತೆಯರನ್ನು ವಂಚಿಸಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ್ ಮಾತನಾಡಿ, ರಾಜ್ಯ ಸರ್ಕಾರ ಏಕಪಕ್ಷೀಯ ಆದೇಶಗಳನ್ನು ಹೊರಡಿಸಿ, ಆಶಾ ಕಾರ್ಯಕರ್ತೆಯರ ಬದುಕಿನ ಮೇಲೆ ಕತ್ತರಿ ಹಾಕುತ್ತಿದೆ. ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಆದೇಶ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿದೆ. ಹತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ಆಶಾ ಸುಗಮಕಾರರನ್ನು ಕೈಬಿಟ್ಟು, ಮರುನೇಮಕದ ಭರವಸೆ ನೀಡಿದರೂ ಇದುವರೆಗೂ ಜಾರಿಗೊಳಿಸದಿರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆ ಎಂದರು.

ಕಳೆದ ನಾಲ್ಕು ತಿಂಗಳ ಬಾಕಿ ಪ್ರೋತ್ಸಾಹಧನ ಪಾವತಿ, ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಗೌರವಧನ ಹಾಗೂ ಪ್ರೋತ್ಸಾಹಧನ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ನಿವಾರಣಾ ಸಭೆ ನಡೆಸಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘಟನೆಯ ಗೌರವಾಧ್ಯಕ್ಷೆ ಶೋಭಾ ಹೂಗಾರ್, ಜಿಲ್ಲಾ ಮುಖಂಡರಾದ ಗಾಯತ್ರಿ, ರೇಣುಕಾ, ಅನ್ನಪೂರ್ಣಾ, ಶಿವಮ್ಮ, ಜ್ಯೋತಿ, ಲಕ್ಷ್ಮಿ, ತಿಪ್ಪಮ್ಮ, ದೀಪಾ, ಅಮರಮ್ಮ, ಶಬನಾ, ಶಾರದಾ, ಲಲಿತಾ, ಸಂಗೀತಾ, ಶರಣಮ್ಮ, ರಜಿಯಾ ಬೇಗಂ, ಗಂಗಮ್ಮ, ಹನುಮಕ್ಕ, ದೇವಕ್ಕ, ನೀಲಮ್ಮ, ಮಹಾದೇವಿ, ಭಾಗ್ಯ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆ ಒತ್ತುವರಿ ಮಾಡಿ ರಸ್ತೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದು ತಪ್ಪಾ?: ಹೇಮಲತಾ ನಾಯಕ
ರಾಮಲಿಂಗ ಕಾಮಣ್ಣನ ಪ್ರತಿಷ್ಠಾಪನೆ: ದರ್ಶನಕ್ಕೆ ಭಕ್ತರ ದಂಡು