6 ತಿಂಗಳಿಂದ ಆಶಾಗಳ ಪ್ರೋತ್ಸಾಹಧನ ಬಾಕಿ

KannadaprabhaNewsNetwork |  
Published : Oct 04, 2026, 02:30 AM IST
ಆಶಾ ಕಾರ್ಯರ್ತೆಯರ | Kannada Prabha

ಸಾರಾಂಶ

ಅತ್ಯಂತ ಕಡಿಮೆ ಗೌರವಧನದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ತಮ್ಮ ಕುಟುಂಬದ ಜವಾಬ್ದಾರಿಯ ನಡುವೆಯೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ರಾಘು ಕಾಕರಮಠ

ಅಂಕೋಲಾ: ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿ ನಿಂತು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮನೆ-ಮನೆಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕಳೆದ ಆರು ತಿಂಗಳಿಂದ ಪ್ರೋತ್ಸಾಹಧನ ಪಾವತಿಯಾಗದೆ ಇರುವುದರಿಂದ ಸಂಕಷ್ಟ ಎದುರಾಗಿದೆ.

ಅತ್ಯಂತ ಕಡಿಮೆ ಗೌರವಧನದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ತಮ್ಮ ಕುಟುಂಬದ ಜವಾಬ್ದಾರಿಯ ನಡುವೆಯೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರು ನಿರ್ವಹಿಸುವ ವಿವಿಧ ಕಾರ್ಯಗಳಿಗೆ ಸರ್ಕಾರದಿಂದ ನೀಡಬೇಕಾದ ಪ್ರೋತ್ಸಾಹಧನ ಹಲವು ತಿಂಗಳುಗಳಿಂದ ಕೈಸೇರದಿರುವುದು ಅವರಲ್ಲಿ ನಿರಾಸೆ ಮೂಡಿಸಿದೆ.

ಪ್ರಸ್ತುತ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕೇವಲ ₹5 ಸಾವಿರ ಗೌರವಧನ ಪಾವತಿಯಾಗುತ್ತಿದೆ. ಇದಲ್ಲದೆ, ಮನೆ- ಮನೆ ಭೇಟಿ, ಗರ್ಭಿಣಿಯರ ಆರೋಗ್ಯದ ಮೇಲ್ವಿಚಾರಣೆ, ಬಾಣಂತಿಯರ ಆರೈಕೆ, ಮಕ್ಕಳ ಆರೋಗ್ಯ, ಲಸಿಕಾ ಕಾರ್ಯಕ್ರಮ, ಆರೋಗ್ಯ ಜಾಗೃತಿ ಸೇರಿದಂತೆ ಹಲವು ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಕಾರ್ಯಗಳಿಗೆ ನಿಗದಿಯಾಗಿರುವ ಪ್ರೋತ್ಸಾಹಧನವೇ ಅವರ ಆದಾಯದ ಪ್ರಮುಖ ಆಧಾರವಾಗಿದೆ.

ಆರೋಗ್ಯ ಇಲಾಖೆಯ ಹಲವು ಕಾರ್ಯಕ್ರಮಗಳು ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿ ತಲುಪುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಬೆಳಗ್ಗಿನಿಂದಲೇ ಮನೆ- ಮನೆಗೆ ತೆರಳಿ ಜನರ ಆರೋಗ್ಯ ವಿಚಾರಿಸುವ ಅವರು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಅಗತ್ಯವಿದ್ದಾಗ ಆರೋಗ್ಯ ಕೇಂದ್ರಗಳಿಗೆ ತೆರಳಲು ಮಾರ್ಗದರ್ಶನ ನೀಡುತ್ತಾರೆ. ಹಲವು ಸಂದರ್ಭಗಳಲ್ಲಿ ತಮ್ಮ ವೈಯಕ್ತಿಕ ಸಮಯವನ್ನೂ ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾರೆ.

ಇಂತಹ ಸೇವೆಯ ನಡುವೆಯೇ 6 ತಿಂಗಳಿನಿಂದ ಪ್ರೋತ್ಸಾಹಧನ ಬಾರದಿರುವುದು ಆಶಾ ಕಾರ್ಯಕರ್ತೆಯರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಮನೆಯ ಖರ್ಚು, ಮಕ್ಕಳ ಶಿಕ್ಷಣ, ದಿನನಿತ್ಯದ ಅಗತ್ಯಗಳ ನಡುವೆ ಅತ್ಯಲ್ಪ ಗೌರವಧನದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂಬುದು ಅವರ ಅಳಲಾಗಿದೆ.

ನಾವು ಮಾಡುವ ಕೆಲಸಕ್ಕೆ ಪ್ರತಿಫಲವಾಗಿ ಬರುವ ಪ್ರೋತ್ಸಾಹಧನದಿಂದ ಮನೆಯ ಸಣ್ಣಪುಟ್ಟ ಅಗತ್ಯತೆಗಳನ್ನು ನಿಭಾಯಿಸಿಕೊಳ್ಳುತ್ತಿದ್ದೆವು. ಹಲವು ತಿಂಗಳಿಂದ ಅದು ಬಾರದಿರುವುದರಿಂದ ಆರ್ಥಿಕ ತೊಂದರೆ ಎದುರಾಗಿದೆ ಎಂದು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.ಜನರ ಆರೋಗ್ಯದ ಕಾಳಜಿ ವಹಿಸುವ ಈ ಕಾರ್ಯಕರ್ತೆಯರ ಬದುಕಿನ ಕಾಳಜಿಯನ್ನೂ ಸರ್ಕಾರ ವಹಿಸಬೇಕಾಗಿದೆ. ಬಾಕಿ ಉಳಿದಿರುವ ಪ್ರೋತ್ಸಾಹಧನವನ್ನು ಶೀಘ್ರವಾಗಿ ಬಿಡುಗಡೆ ಮಾಡಿ, ಮುಂದಿನ ದಿನಗಳಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಆಶಾ ಕಾರ್ಯಕರ್ತೆಯರ ಒತ್ತಾಯವಾಗಿದೆ.

ಆರೋಗ್ಯ ಸೇವೆಯ ಮುಂಚೂಣಿಯಲ್ಲಿ ನಿಂತಿರುವ ಆಶಾ ಕಾರ್ಯಕರ್ತೆಯರ ಬದುಕಿಗೆ ಸರ್ಕಾರದ ಪ್ರೋತ್ಸಾಹದ ನೆರವು ಯಾವಾಗ ದೊರೆಯಲಿದೆ ಎಂಬುದೇ ಇದೀಗ ಪ್ರಶ್ನೆಯಾಗಿದೆ.

ಕಳೆದ 6 ತಿಂಗಳಿಂದ ಪ್ರೋತ್ಸಾಹ ಧನ ಬರದೆ ನಾವು ಅತಂತ್ರರಾಗಿದ್ದೇವೆ. ಕೂಡಲೇ ಸರ್ಕಾರ ನಮ್ಮ ಬದುಕಿಗೆ ಆಸರೆ ಒದಗಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಗೊಳಿಸುವ ಮೂಲಕ ನಮ್ಮ ನೆರೆವಿಗೆ ಬರುವಂತಾಗಲಿ ಎಂದು ಆಶಾ ಕಾರ್ಯರ್ತೆಯರ ಸಂಘದ ತಾಲೂಕಾಧ್ಯಕ್ಷರಾದ ಚಂದ್ರಕಲಾ ನಾಯ್ಕ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
ಮೇವು ಕೊರತೆ: ರೈತರಲ್ಲಿ ಆತಂಕ