12ರಿಂದ ರಾಜ್ಯವ್ಯಾಪಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆ

KannadaprabhaNewsNetwork |  
Published : Aug 10, 2025, 01:30 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ     | Kannada Prabha

ಸಾರಾಂಶ

ಆಶಾ ಕಾರ್ಯಕರ್ತೆಯರು ಆ.12 ರಿಂದ ರಾಜ್ಯವ್ಯಾಪಿ ಕೈಗೊಂಡಿರುವ ಪ್ರತಿಭಟನೆ ಕುರಿತ ಪೋಸ್ಟರ್‌ಗಳನ್ನು ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.12 ರಿಂದ ಆಶಾ ಕಾರ್ಯಕರ್ತರು ರಾಜ್ಯವ್ಯಾಪಿ ಅಹೋರಾತ್ರಿ ಪ್ರತಿಭಭಟನೆ ಹಮ್ಮಿಕೊಂಡಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿದಂತೆ ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರವಿಕುಮಾರ್, ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ. ಇವರ ಸೇವೆಗೆ ಸಮುದಾಯದಿಂದ ಸಿಗುವ ಗೌರವಾದರಗಳು ಸಂತಸ ನೀಡಿವೆಯಾದರೂ, ಸೇವೆ ಪಡೆದುಕೊಳ್ಳುವ ಸರ್ಕಾರಗಳು ಸೇವೆಗೆ ತಕ್ಕ ಪ್ರತಿಫಲ ನೀಡದೆ ನಿರಾಸೆಯಲ್ಲಿರುವಂತೆ ಮಾಡಿವೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ, ಜ.7 ರಿಂದ 10 ರವರೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. 15 ಸಾವಿರ ರು. ನಿಶ್ಚಿತ ಗೌರವಧನಕ್ಕಾಗಿ ಆಗ್ರಹಿಸಿ ನಡೆಸಿದ ಈ ಹೋರಾಟದಲ್ಲಿ ರಾಜ್ಯದ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಮುಖ್ಯಮಂತ್ರಿಗಳು ಸಂಘದ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು ಇದುವರೆಗೂ ಈಡೇರಿಲ್ಲವೆಂದು ಆಪಾದಿಸಿದರು.

ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ರು.10 ಸಾವಿರ ಗ್ಯಾರಂಟಿಯನ್ನು ಏಪ್ರಿಲ್‌ನಿಂದ್‌ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. 2025 ಮಾರ್ಚ್ ರಾಜ್ಯ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ರು. ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಟ್ಟು ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು ಎಂದು ಒತ್ತಾಯಿಸಿದರು.

ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು.ನಗರ ಆಶಾಗಳಿಗೆ 2 ಸಾವಿರ ರು. ಗೌರವಧನ ಹೆಚ್ಚಿಸಬೇಕು. 2025 ಜೂನ್-ಜುಲೈ ನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ರವಿಕುಮಾರ್ ಆಗ್ರಹಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಕುಮುದಾ, ಸುಜಾತ ಇದ್ದರು.

PREV

Recommended Stories

ನಾಡಿದ್ದಿನಿಂದ ನೀವೂ ರಾಜಭವನ ವೀಕ್ಷಿಸಿ : ಉಚಿತ ಪ್ರವೇಶ
17ರಂದು ಬಿಜೆಪಿ ಮುಖಂಡರ ಜತೆ ಧರ್ಮಸ್ಥಳ ಭೇಟಿ: ಬಿವೈವಿ