ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು

KannadaprabhaNewsNetwork |  
Published : Aug 15, 2025, 01:00 AM IST
ಮಾನವ ಸರಪಳಿ | Kannada Prabha

ಸಾರಾಂಶ

ಇಂದು ನಮ್ಮನ್ನು ಆಳುತ್ತಿರುವ ಎಲ್ಲಾ ಪಕ್ಷಗಳು ಬಂಡವಾಳಗಾರರ ಹಿತಾಸಕ್ತಿಯನ್ನು ಕಾಪಾಡುತ್ತವೆಯೇ ಹೊರತು ಕಾರ್ಮಿಕರ, ರೈತರ, ಕೃಷಿ ಕಾರ್ಮಿಕರ ಹಿತವನ್ನಲ್ಲ.

ಕಾರವಾರ: ಆಶಾ ಕಾರ್ಯಕರ್ತೆಯ ಮೂರು ದಿನಗಳ ಅಹೋರಾತ್ರಿ ಹೋರಾಟದ ಮೂರನೇ ದಿನವಾದ ಗುರುವಾರ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ನಂತರ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಬಂದು ಧರಣಿ ನಡೆಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮುಖಂಡ ಗಣಪತಿ ಹೆಗಡೆ, ಇಂದು ನಮ್ಮನ್ನು ಆಳುತ್ತಿರುವ ಎಲ್ಲಾ ಪಕ್ಷಗಳು ಬಂಡವಾಳಗಾರರ ಹಿತಾಸಕ್ತಿಯನ್ನು ಕಾಪಾಡುತ್ತವೆಯೇ ಹೊರತು ಕಾರ್ಮಿಕರ, ರೈತರ, ಕೃಷಿ ಕಾರ್ಮಿಕರ ಹಿತವನ್ನಲ್ಲ. ಈಗ ಒಗ್ಗಟ್ಟಿನ ಹೋರಾಟವೊಂದೇ ನಮಗೆ ಉಳಿದಿರುವ ಮಾರ್ಗ. ಎಲ್ಲಾ ಆಶಾ ಕಾರ್ಯಕರ್ತೆಯರು ಒಗ್ಗಟ್ಟಾಗಿ ಬೃಹತ್ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿರುವುದು ಗಮನಾರ್ಹವಾದದ್ದು. ಆ ನಿಟ್ಟಿನಲ್ಲಿ ಮೂರು ದಿನಗಳ ಹೋರಾಟ ರಾಜ್ಯ ವ್ಯಾಪಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದರು.

ಆಶಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಂಗೀತ ಗುರಂಕೊಳ್ಳ, ಜನಸಂಖ್ಯೆ ಮಿತಿಯನ್ನು ಹೆಚ್ಚಿಸಿ ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವ ತೀರ್ಮಾನವನ್ನು ಕೈ ಬಿಟ್ಟಿರುವುದು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಂದ ಜಯವಾಗಿದೆ. ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಗರಿಷ್ಠ ಒಂದು ಸಾವಿರ ಜನಸಂಖ್ಯೆಗೆ, ನಗರದಲ್ಲಿ ಗರಿಷ್ಠ 2000 ಜನಸಂಖ್ಯೆಗೆ ಒಬ್ಬ ಆಶಾ ಕೆಲಸ ಮಾಡಬೇಕೆಂಬ ಹಳೆಯ ಮಾರ್ಗಸೂಚಿಗೆ ಬದ್ಧವಾಗಿರುವುದಾಗಿ ಹೇಳಿದೆ. ಮೌಲ್ಯಮಾಪನದ ಕ್ರಮವೂ ಆಶಾ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಮಾತ್ರ ಮಾಡಿದ್ದು ಕೆಲಸದಿಂದ ವಜಾಗೊಳಿಸಲಾಗುವುದು ಎಂಬ ಯಾವುದೇ ಆತಂಕ ಬೇಡ ಎಂದು ಇಲಾಖೆ ಸ್ಪಷ್ಟಿಕರಣ ನೀಡಿದೆ.

ಈ ಎಲ್ಲ ಬೆಳವಣಿಗೆಗಳು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿದರು. ಆಶಾ ಸಂಘಟನೆಯ ಪದ್ಮಾಚಲವಾದಿ, ಜಿಲ್ಲಾ ಮುಖಂಡರುಗಳಾದ ಶ್ವೇತಾ ಕಪಡಸ್ಕರ್, ನೀವೇದಿತಾ ಕೊಳಂಬಕರ್, ಚಂದ್ರಕಲಾ, ಹಾಲಮ್ಮ, ಶೋಭಾ ನಾಯಕ್, ಪ್ರಭಾಮಣಿ, ಅರ್ಚನಾ, ಲಕ್ಷ್ಮೀನಾಯಕ್, ಅನ್ನಪೂರ್ಣ, ಶಾರದ ನಾಯಕ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!