ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಆ.12 ರಿಂದ 14ರವರೆಗೆ ರಾಜ್ಯವ್ಯಾಪಿ ಜಿಲ್ಲಾ ಮಟ್ಟದಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ (ಎಐಯುಟಿಯುಸಿ) ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹಲವು ದಿನಗಳದ್ದಾಗಿದೆ. ಇದು ನಮ್ಮ ಕಣ್ಣೀರಿನ ಕಥೆ, ಗ್ರಾಮೀಣ ಮತ್ತು ಕೊಳಚೆ ಪ್ರದೇಶದ ಜನರ ಅದರಲ್ಲೂ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಬಂಧಿತ ಬೇಡಿಕೆಗಳಿಗೆ ಮೊದಲು ಸ್ಪಂಧಿಸುವವರೇ ಆಶಾ ಕಾರ್ಯಕರ್ತೆಯರು. ಹಗಲು-ರಾತ್ರಿ ಶ್ರಮಿಸುತ್ತಾರೆ. ಆದರೆ ದುಡಿಮೆಗೆ ತಕ್ಕ ಫಲವಿಲ್ಲ. ಹಲವು ಭಾರಿ ಪ್ರತಿಭಟನೆ ಮಾಡಿದ್ದರೂ ಕೂಡ ಸರ್ಕಾರ ಯಾವ ಸ್ಪಂದನೆಯನ್ನೂ ನೀಡುತ್ತಿಲ್ಲ. ಈ ಹಿಂದೆ ಪ್ರತಿಭಟನೆ ಮಾಡಿದ್ದಾಗ, ಮುಖ್ಯಮಂತ್ರಿಗಳೇ ಖುದ್ದಾಗಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಹೇಳಿದ್ದರು. ಆಗ ನಾವು ಪ್ರತಿಭಟನೆಯನ್ನು ವಾಪಾಸ್ಸು ತೆಗೆದುಕೊಂಡಿದ್ದೆವು. ಆದರೆ ನಮ್ಮ ಸಮಸ್ಯೆಗಳು ಹಾಗೇ ಉಳಿದುಕೊಂಡವು. ಮಾತುಕೊಟ್ಟಂತೆ ಸರ್ಕಾರ ನಡೆದುಕೊಳ್ಳಬೇಕು ಎಂದರು.
ಕನಿಷ್ಠ ಮಾಸಿಕ ಧನ 10 ಸಾವಿರ ರು.ಗಳನ್ನು ಏಪ್ರಿಲ್‌ನಿಂದಲೇ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ಆಶಾ ಕಾರ್ಯಕರ್ತೆಯರಿಗೂ ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದಂತೆ 1000 ರು.ಗಳ ಪ್ರೋತ್ಸಾಹ ಧನ ನೀಡಬೇಕು. ಜನಸಂಖ್ಯೆ ಮಿತಿಯನ್ನು ನಿಗದಿಗೊಳಿಸುವುದನ್ನು ಕೈಬಿಡಬೇಕು. ಯಾವುದೇ ಆಶಾ ಕಾರ್ಯಕರ್ತೆಯರನ್ನು ಜನಸಂಖ್ಯೆ ಆಧಾರದಿಂದ ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು. ಕಾರ್ಯನಿರ್ವಹಣಾ ಮೌಲ್ಯಮಾಪನ ಅವೈಜ್ಞಾನಿಕವಾಗಿದ್ದು, ಅದನ್ನು ಕೈಬಿಡಬೇಕು. ಪಶ್ಚಿಮ ಬಂಗಾಳದ ಮಾದರಿಯಲ್ಲಿ ನಿವೃತ್ತರಾದವರಿಗೆ ಇಡಿಗಂಟು ನೀಡಬೇಕು. ನಗರದ ಆಶಾ ಕಾರ್ಯಕರ್ತೆಯರಿಗೆ ಎರಡು ಸಾವಿರ ರು. ಗೌರವಧನ ಹೆಚ್ಚಿಸಬೇಕು. ಕೇಂದ್ರ ಸರ್ಕಾರ ಜೂನ್‌ನಲ್ಲಿ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲೇಬೇಕು ಎಂದು ಒತ್ತಾಯಿಸಿದರು.ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲಾ ಮಟ್ಟದಲ್ಲಿ ಆಗಸ್ಟ್ 12 ರಿಂದ ಮೂರು ದಿನಗಳ ಕಾಲ ಅಹೋರಾತ್ರಿ ಧರಣಿಯನ್ನು ನಾವು ಹಮ್ಮಿಕೊಂಡಿದ್ದೇವೆ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಮತ್ತಷ್ಟು ತೀವ್ರವಾಗಿ ಪ್ರತಿಭಟನೆಯನ್ನು ವಿಸ್ತರಿಸುತ್ತೇವೆ. ಜಿಲ್ಲೆಯಲ್ಲಿ ಸುಮಾರು 1300 ಆಶಾ ಕಾರ್ಯಕರ್ತೆಯರಿದ್ದಾರೆ. ಈ ಎಲ್ಲಾ ಕಾರ್ಯಕರ್ತೆಯರು ಧರಣಿಯಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಉಸ್ತುವಾರಿ ಸುಬ್ಬರಾಜು, ಕಾರ್ಯದರ್ಶಿ ಚಂದ್ರಕಲಾ, ಪ್ರಮುಖರಾದ ರೇಣುಕಾ, ನಾಗರತ್ನ, ಸರಸ್ವತಿ ಮುಂತಾದವರಿದ್ದರು.