ಕನ್ನಡಪ್ರಭ ವಾರ್ತೆ ಬೀದರ್
ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಬೇಕು, ಸಬಲರಾಗಬೇಕು.ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹು ಮುಖ್ಯವಾಗಿದೆ ಎಂದು ಎಫ್‌ಪಿಎಐ ಮಾಜಿ ಅಧ್ಯಕ್ಷ ಡಾ.ವಿಜಯಶ್ರೀ ಬಶೆಟ್ಟಿ ತಿಳಿಸಿದರು.ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್‌ಪಿಎಐ) ಬೀದರ್ ಶಾಖೆಯಲ್ಲಿ ಶನಿವಾರ ಆಶಾ ಕಾರ್ಯಕರ್ತೆಯರಿಗೆ ‘ವೈದ್ಯಕೀಯ ಗರ್ಭಪಾತ ಕಾಯ್ದೆ’ಕುರಿತು ಅರಿವು / ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಾಜದಲ್ಲಿ ಲಿಂಗಭೇದ, ವರದಕ್ಷಿಣೆ ಪಿಡುಗು, ಬಾಲ್ಯವಿವಾಹ, ಹೆಣ್ಣು ಭ್ರೂಣಹತ್ಯೆ, ಲೈಂಗಿಕ ದೌರ್ಜನ್ಯ ಇನ್ನು ಹತ್ತು ಹಲವಾರು ರೀತಿಯಲ್ಲಿ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು. ಸರ್ಕಾರ ಹೆಣ್ಣುಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಕಾರ್ಯರೂಪದಲ್ಲಿ ತಂದಿದೆ ಎಂದರು.ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದಿಲೀಪ್ ಡೊಂಗ್ರೆ ಉದ್ಘಾಟಿಸಿ ಮಾತನಾಡಿ, ಕುಟುಂಬ ಯೋಜನೆ ಜೀವನದ ಬಹು ಮುಖ್ಯವಾದ ಜವಬ್ದಾರಿಯಾಗಿದೆ. ಆಶಾ ಕಾರ್ಯಕರ್ತೆ ಯರು ಸಮುದಾಯ ಹಾಗೂ ಆರೋಗ್ಯ ಇಲಾಖೆಯ ನಡುವೆ ಸೇತುವೆ ತರಹ ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಆಶಾ ಕಾರ್ಯಕರ್ತೆಯರು ವೈಧ್ಯಕೀಯ ಗರ್ಭಪಾತದ ಕುರಿತು ಹೆಚ್ಚಿನ ಮಾಹಿತಿ ಪಡೆಯುವುದು ಬಹಳಷ್ಟು ಮುಖ್ಯವಾಗಿದೆ ಎಂದರು.ಸಂಸ್ಥೆಯ ಮಾಜಿ ಖಜಾಂಚಿ ಡಾ.ಆರತಿ ರಘು ಇವರು ವೈದ್ಯಕೀಯ ಗರ್ಭಪಾತ ಎಂದರೇನು? ಭಾರತದಲ್ಲಿ ವೈದ್ಯಕೀಯ ಗರ್ಭಪಾತದ ಕಾನೂನು ಯಾವ ರೀತಿ ಇದೆ? ಅದರ ನಿಯಮಗಳು ಯಾವುವು? ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು.ಎಫ್‌ಪಿಎಐ ಶಾಖೆಯ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಶಾಖೆಯ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿ, ಮಹಿಳೆಯರ ಮೇಲಾಗುತ್ತಿರು ಶೋಷಣೆ ವಿರುದ್ದ ಜಾಗೃತಿ ಮೂಡಿಸಲು ನವೆಂಬರ್ 25 ರಿಂದ ಡಿಸೆಂಬರ್ 10ರ ವರೆಗೆ ಮಹಿಳೆಯರ ಮೇಲಾಗುವ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ಅಭಿಯಾನ ನಡೆಯುತ್ತದೆ. ಇತ್ತೀಚಿಗೆ ಸಮಾಜದಲ್ಲಿ ಅಸುರಕ್ಷಿತ ಗರ್ಭಪಾತಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟಲು ಆಶಾ ಕಾರ್ಯಕರ್ತೆಯರು ವೈದ್ಯಕೀಯ ಗರ್ಭಪಾತದ ಕಾಯಿದೆ ಬಗ್ಗೆ ಮಾಹಿತಿ ತಿಳಿದುಕೊಂಡು ಸಮುದಾಯದಲ್ಲಿ ಅರಿವು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.ಆರೋಗ್ಯ ಇಲಾಖೆಯ ಸಂಯೋಜಕರಾದ ಶಿವಶಂಕರ, ಶಾಖೆಯ ಆಪ್ತಸಮಾಲೋಚಕರಾದ ವಿನಾಯಕ ಕುಲಕರ್ಣಿ,ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷಿ ಹುಡುಗೆ ಮತ್ತಿತರರು ಇದ್ದರು.