ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆ ದೇವಾಲಯದಲ್ಲಿ ವರ್ಷಕ್ಕೆರಡು ಸಲ ಮಾತ್ರ ಸ್ವಾಮಿಗೆ ಕಲ್ಯಾಣೋತ್ಸವ ಹಾಗೂ ಮಹಾಭಿಷೇಕ ನಡೆಯುವ ಸಂಪ್ರದಾಯವಿದ್ದು, ವೈರಮುಡಿ ಬ್ರಹ್ಮೋತ್ಸವ ಬಿಟ್ಟರೆ ಮಹಾರಾಜ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದಂದು ಮಹಾಭಿಷೇಕ ಮತ್ತು ಕಲ್ಯಾಣೋತ್ಸವ ನಡೆಯುತ್ತಿದೆ.
ಈ ವರ್ಷ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮನಕ್ಷತ್ರದ ಅಂಗವಾಗಿ ಆಷಾಢ ಮಾಸದ ಉತ್ತರಾಷಾಡ ದ್ವಿತೀಯೆಯಂದು ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಶಸ್ತವಾದ ಜುಲೈ 12ರಂದು ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ಹಾಗೂ ಸಂಜೆ ಕಲ್ಯಾಣೋತ್ಸವ ನಡೆಯಲಿದೆ.ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಅಂಗವಾಗಿ ಜುಲೈ 16ರಂದು ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪಾರ್ಕಾವಣೆ ಮಾಡಿ ಶ್ರೀದೇವಿ-ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣ ಸ್ವಾಮಿಗೆ ಧರಿಸಿ ನಾಲ್ಕು ಬೀದಿಗಳಲ್ಲಿ ಉತ್ಸವ ನೆರವೇರಿಸಲಾಗುತ್ತದೆ.
ಜುಲೈ 11ರಿಂದ 22ರವರೆಗೆ ದೇವಾಲಯದ ರಾಜಗೋಪುರಕ್ಕೆ ದೀಪಾಲಂಕಾರ, ರಾಜಬೀದಿಗೆ ದೀಪಗಳ ತೋರಣ ಅಳವಡಿಸಲಾಗುತ್ತದೆ. ಮಹಾರಾಜರ ಜನ್ಮ ನಕ್ಷತ್ರದಂದು ಮುಮ್ಮುಡಿ ಕೃಷ್ಣರಾಜ ಒಡೆಯರ್ ಮತ್ತು ರಾಣಿಯರ ಭಕ್ತ ವಿಗ್ರಹಕ್ಕೆ ಸಾಂಪ್ರದಾಯಿ ವಿಶೇಷ ಪೂಜೆ ಅರ್ಪಿಸಲಾಗುತ್ತದೆ. ಬ್ರಹ್ಮೋತ್ಸವಗಳ ವೇಳೆ ನಡೆಯುವ ಪ್ರಮುಖ ಉತ್ಸವಗಳಿಗೆ ವಿಶೇಷ ಮಂಗಳವಾದ್ಯ ನಿಯೋಜಿಸಲಾಗುವುದು ಎಂದು ದೇಗುಲದ ಇಒ ಶೀಲಾ ಮಾಹಿತಿ ನೀಡಿದ್ದಾರೆ