ಉದ್ಯೋಗ ಮೇಳದಲ್ಲಿ ಆಯ್ಕೆಯಾದ ೫೦ ಫಲಾನುಭವಿಗಳನ್ನು ಬೆಂಗಳೂರಿನ ಟಾಟಾ ಕಮ್ಯುನಿಕೇಶನ್ಗೆ ಕಳುಹಿಸುವ ವ್ಯವಸ್ಥೆ
ಕನ್ನಡಪ್ರಭ ವಾರ್ತೆ, ಕೊಪ್ಪಶೃಂಗೇರಿ ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ಆಯೋಜಿಸಿರುವ ಕೀರ್ತಿ ಸುಧಾಕರ್ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದು ಜೆಡಿಎಸ್ ಮುಖಂಡ ಎಚ್.ಜಿ. ವೆಂಕಟೇಶ್ ಹೇಳಿದರು.ಪಟ್ಟಣದ ಶಾಂತ ಎಂಟರ್‌ಪ್ರೈಸಸ್‌ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು ಉದ್ಯೋಗ ಮೇಳದ ಮೂಲಕ ಆಯ್ಕೆಯಾದ ೫೦ ಮಂದಿ ಫಲಾನುಭವಿಗಳನ್ನು ಬೆಂಗಳೂರಿನ ಹೊಸೂರು ರಸ್ತೆಯ ಟಾಟಾ ಕಮ್ಯುನಿಕೇಶನ್ ಸಂಸ್ಥೆಗೆ ಕಳುಹಿಸುವ ವ್ಯವಸ್ಥೆಯನ್ನು ಸುಧಾಕರ್ ಶೆಟ್ಟಿ ತಮ್ಮದೇ ಖರ್ಚಿನಲ್ಲಿ ಮಾಡಿದ್ದಾರೆ. ಪ್ರಯಾಣಕ್ಕೆ ಬಸ್, ಬೆಳಗ್ಗೆ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಲ್ಲದೆ, ಮಹಿಳೆಯರ ಭದ್ರತೆ ಖಚಿತಪಡಿಸುವ ನಿಟ್ಟಿನಲ್ಲಿ ತಮ್ಮ ಸಹಚರರನ್ನು ಕಳುಹಿಸಿದ್ದಾರೆ.ಸುಧಾಕರ್ ಶೆಟ್ಟಿಯವರು ಕೇವಲ ಪ್ರಚಾರಕ್ಕಾಗಿ ಅಲ್ಲ, ಮಾತಿನಂತೆ ನಡೆದುಕೊಂಡು ಕಾರ್ಯದಲ್ಲಿ ನಿಷ್ಠೆ ತೋರಿಸುವ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೆಣ್ಣುಮಕ್ಕಳು ಯಾವ ಉದ್ಯೋಗ ಮಾಡಿದರೂ ಅದು ಅವರ ಜೀವನದ ಮೊದಲ ಹೆಜ್ಜೆ. ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಇದ್ದರೆ ನಿಮ್ಮ ಭವಿಷ್ಯ ಉಜ್ವಲವಾಗುವುದು ಖಚಿತ ಎಂದರು.ಅಮ್ಮ ಫೌಂಡೇಶನ್ ಉದ್ಯೋಗ ಮೇಳದಿಂದ ಶೃಂಗೇರಿ ಕ್ಷೇತ್ರಕ್ಕೆ ಪ್ರತಿ ತಿಂಗಳು ₹೪೦ ಲಕ್ಷ ರು. ಆದಾಯ ಬರಲಿದೆ. ಅಂದರೆ ೨೦೦ ಜನರಿಗೆ ಉದ್ಯೋಗ ನೀಡಿರುವ ಸಂಸ್ಥೆ ಪ್ರತೀ ತಿಂಗಳು ಒಬ್ಬರಿಗೆ ₹೧೯೦೦೦ ರು. ಗಳಂತೆ ₹೪೦ಲಕ್ಷ ರು. ಗಳಷ್ಟು ಕ್ಷೇತ್ರಕ್ಕೆ ಉದ್ಯೋಗ ಆಕಾಂಕ್ಷಿಗಳಿಂದ ಆದಾಯ ಬರಲಿದೆ. ಇದು ಇಲ್ಲಿನ ಆರ್ಥಿಕ ಬೆಳವಣಿಗೆಗೂ ಪೂರಕ ಎಂದು ತಿಳಿಸಿದರು.ನಾನು ಕಂಡಂತೆ ಹಲವಾರು ರಾಜಕಾರಣಿಗಳು ಕೇವಲ ಪ್ರಚಾರ ಮತ್ತು ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ನಾನು ಸುಧಾಕರ್ ಶೆಟ್ಟಿ ಅವರಲ್ಲಿ ವಿಶೇಷ ವ್ಯಕ್ತಿತ್ವ ಕಂಡಿದ್ದೇನೆ. ಮಲೆನಾಡಿನ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಈ ಭಾಗದ ಹಲವಾರು ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿರುವುದು, ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಇದುವರೆಗೂ ಸುಮಾರು ೨೮ ಆರೋಗ್ಯ ಶಿಬಿರ ಆಯೋಜಿಸಿ ಸಾವಿರಾರು ಜನರಿಗೆ ಕನ್ನಡ ಕನ್ನಡಕಗಳ ವಿತರಣೆ ಹಾಗೂ ನೇತ್ರ ಚಿಕಿತ್ಸೆ , ಕಳೆದ ೫ ವರ್ಷಗಳಲ್ಲಿ ೪ನೇ ಉದ್ಯೋಗ ಮೇಳ ಮಾಡಿ, ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿರುವುದು, ಹಾಗೆಯೇ ಮೂಲಭೂತ ಸೌಕರ್ಯ - ಇತ್ತೀಚಿಗೆ ನಡೆದ ಕೊಪ್ಪದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯದಲ್ಲಿ ಅವರೇ ಸ್ವತಃ ಲಕ್ಷಾಂತರ ರೂ. ಖರ್ಚು ಮಾಡಿ ರಸ್ತೆಯ ಗುಂಡಿ ಮುಚ್ಚಿರುವುದು ವಿಶಿಷ್ಟ ವ್ಯಕ್ತಿಯ ಒಂದು ಚಿತ್ರಣ ಎಂದು ಹೇಳಿದರು. ವೇದಿಕೆಯಲ್ಲಿ, ಕೊಪ್ಪ ತಾಲೂಕು ಜೆಡಿಎಸ್ ಉಪಾಧ್ಯಕ್ಷ ಕುಂಚೂರು ವಾಸಪ್ಪ, ಎನ್.ಆರ್. ಪುರ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಶಿವದಾಸ್, ಅಮ್ಮ ಫೌಂಡೇಶನ್‌ನ ಮುಖ್ಯಸ್ಥ ಗುರುಪ್ರಸಾದ್ ಕಲ್ಲುಗುಡ್ಡೆ, ಜೆಡಿಎಸ್‌ನ ಕೊಪ್ಪ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಹಾಗೂ ನೂರಾರು ಜನ ಪೋಷಕ ವೃಂದದವರು ಈ ಸಭೆಯಲ್ಲಿ ಭಾಗವಹಿಸಿದ್ದರು.