ಸರ್ವೀಸ್ ರಸ್ತೆಯಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಅಶೋಕ ಪೂಜಾರಿ ಆಗ್ರಹ

KannadaprabhaNewsNetwork |  
Published : Aug 14, 2026, 02:15 AM IST
ಅಶೋಕ್‌ ಪೂಜಾರಿ | Kannada Prabha

ಸಾರಾಂಶ

ಕೋಟ-ಬಾಳೆಬೆಟ್ಟು ಹಾಗೂ ಕೋಟೇಶ್ವರ-ಕುಂದಾಪುರ ಮಾರ್ಗದಲ್ಲಿ ನಿರ್ಮಿಸಿರುವ ಸರ್ವೀಸ್ ರಸ್ತೆಗಳಲ್ಲೇ ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್‌ಗಳು ಸಂಚರಿಸಿ, ನಿಗದಿತ ಬಸ್‌ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವಂತೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದ್ದಾರೆ.

ಕುಂದಾಪುರ: ಕೋಟ-ಬಾಳೆಬೆಟ್ಟು ಹಾಗೂ ಕೋಟೇಶ್ವರ-ಕುಂದಾಪುರ ಮಾರ್ಗದಲ್ಲಿ ನಿರ್ಮಿಸಿರುವ ಸರ್ವೀಸ್ ರಸ್ತೆಗಳಲ್ಲೇ ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್‌ಗಳು ಸಂಚರಿಸಿ, ನಿಗದಿತ ಬಸ್‌ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವಂತೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದ್ದಾರೆ.

ಕೋಟದಿಂದ ಬಾಳೆಬೆಟ್ಟು ತನಕ ಸುಮಾರು ಎರಡೂವರೆ ಕಿ.ಮೀ. ಉದ್ದದ ಸರ್ವೀಸ್ ರಸ್ತೆಯ ಎರಡೂ ಬದಿಯಲ್ಲಿ ಐದಾರು ಬಸ್‌ ನಿಲ್ದಾಣಗಳಿದ್ದರೂ ಬಸ್‌ಗಳು ಸರ್ವೀಸ್ ರಸ್ತೆಗೆ ಇಳಿಯದೆ ಹೆದ್ದಾರಿಯಲ್ಲೇ ನಿಲುಗಡೆ ಮಾಡುತ್ತಿವೆ. ಇದರಿಂದ ಪ್ರಯಾಣಿಕರು ಬಸ್‌ ಹತ್ತಲು ಹೆದ್ದಾರಿಯ ಗ್ರಿಲ್‌ಗಳನ್ನು ಹಾರಿ ರಸ್ತೆ ದಾಟಬೇಕಾದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ಹೆದ್ದಾರಿಯಲ್ಲೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿ, ಇಳಿಸುವುದರಿಂದ ಹಿಂದಿನಿಂದ ವೇಗವಾಗಿ ಬರುವ ವಾಹನಗಳಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಕೋಟೇಶ್ವರದಿಂದ ಕುಂದಾಪುರದವರೆಗೂ ಇದೇ ಸಮಸ್ಯೆ ಮುಂದುವರಿದಿದ್ದು, ಸಾರ್ವಜನಿಕರ ಅನುಕೂಲ ಹಾಗೂ ಸುರಕ್ಷತೆಗಾಗಿ ನಿರ್ಮಿಸಿರುವ ಸರ್ವೀಸ್ ರಸ್ತೆಯ ಉದ್ದೇಶವೇ ವಿಫಲವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದ್ದು, ಸರ್ವೀಸ್ ರಸ್ತೆಯ ನಿಲ್ದಾಣಗಳಿಗೆ ಬಸ್‌ಗಳು ತೆರಳದಿರುವುದು ಯೋಜನೆಯ ಫಲಾನುಭವಿಗಳಿಗೂ ತೊಂದರೆ ಉಂಟುಮಾಡುತ್ತಿದೆ. ವಿಶೇಷವಾಗಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಹೆದ್ದಾರಿಗೆ ಬಂದು ಬಸ್‌ ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ.ಆದ್ದರಿಂದ ಕೋಟ-ಬಾಳೆಬೆಟ್ಟು ಹಾಗೂ ಕೋಟೇಶ್ವರ-ಕುಂದಾಪುರ ಮಾರ್ಗದಲ್ಲಿ ಬಸ್‌ಗಳು ಕಡ್ಡಾಯವಾಗಿ ಸರ್ವೀಸ್ ರಸ್ತೆಯಲ್ಲೇ ಸಂಚರಿಸಿ, ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವಂತೆ ಸಾರಿಗೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಸುರಕ್ಷತೆ ಹಾಗೂ ಶಕ್ತಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಅಶೋಕ ಪೂಜಾರಿ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿ.ನಾಗೇಂದ್ರ ರಾಜೀನಾಮೆಗೆ ನೀಡಲಿ
ನಡುಗಡ್ಡೆ ಪ್ರದೇಶದ ಸಂತ್ರಸ್ತರಿಗೆ ತಕ್ಷಣವೇ ನಿವೇಶನ ಕೊಡಿ