ಕನ್ನಡಪ್ರಭ ವಾರ್ತೆ ಮಲ್ಪೆ
ಎಂಟು ನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಇಲ್ಲಿನ ವಡಭಾಂಡೇಶ್ವರ ಶ್ರೀ ಬಲರಾಮ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಅತ್ಯಂತ ವೈಭವದಿಂದ ಯಶಸ್ವಿಯಾಗಿ ಸಂಪನ್ನಗೊಂಡಿದೆ.ದೇಗುಲದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿತು.
ಸೋಮವಾರ ಬೆಳಗ್ಗೆ 6.45 ರ ಮೀನ ಲಗ್ನ ಸುಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯಿತು. ಬಳಿಕ ನ್ಯಾಸಪೂಜೆ, ಪ್ರಸನ್ನ ಪೂಜೆ, ಅವಸೃತ ಬಲಿ, ಮಹಾ ಮಂತ್ರಕ್ಷತೆ, ಪ್ರಸಾದ ವಿತರಣೆಯಾಯಿತು. ಮಧ್ಯಾಹ್ನ ಪಲ್ಲಪೂಜೆಯಾಗಿ ಮಹಾಅನ್ನಸಂತರ್ಪಣೆ ನಡೆಯಿತು. ಸುಮಾರು 15ಸಾವಿರ ಮಂದಿ ಭಕ್ತರು ಪಾಲ್ಗೊಂಡಿದ್ದು ಅನ್ನಪ್ರಸಾದವನ್ನು ಸ್ವೀಕರಿಸಿದರು.ದೇವಳದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರ್, ಅಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್, ಪವಿತ್ರಪಾಣಿ ಶಂಕರನಾರಾಯಣ ಐತಾಳ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ್ ಕೊಡವೂರು, ಹಾಗೂ ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಭಕ್ತವೃಂದ, ಗುರಿಕಾರರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇಂದು ಮಹಾರಥೋತ್ಸವ: ಇಂದು (ಬುಧವಾರ) ದೇವಳದ ಮಹಾರಥೋತ್ಸವವು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ ದೇವಸ್ಥಾನದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹಣ್ಯ ತಂತ್ರಿಗಳ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು.ಇಂದು ಬೆಳಗ್ಗೆ 10.15 ಗಂಟೆಗೆ ರಥಾರೋಹಣ, ಉತ್ಸವ ಬಲಿ, ರಾತ್ರಿ 7 ಗಂಟೆಗೆ ರಥೋತ್ಸವ ಆರಂಭಗೊಂಡು, ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ ಮತ್ತು ಓಲಗ ಮಂಟಪ ಪೂಜೆ, ರಾತ್ರಿ ಭೂತ ಬಲಿ ಇತ್ಯಾದಿಗಳು ನಡೆಯಲಿವೆ.