ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಿಗೆ ಮುಳಿಯ ಪ್ರಶಸ್ತಿ

KannadaprabhaNewsNetwork |  
Published : Mar 20, 2024, 01:23 AM IST
ವಸಂತ19 | Kannada Prabha

ಸಾರಾಂಶ

ಹಿರಿಯ ವಿದ್ವಾಂಸ ಡಾ.ನಾ.ದಾಮೋದರ ಶೆಟ್ಟಿ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದ್ದು, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯು 10 ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ.

ಕನ್ನಡಪ್ರಭ ವಾರ್ತೆ ಉಡುಪಿಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿ.ಮುಳಿಯ ತಿಮ್ಮಪ್ಪಯ್ಯ ಅವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಗಮಕ ವ್ಯಾಖ್ಯಾನಕಾರ, ಯಕ್ಷಗಾನ ಪ್ರಸಂಗಕರ್ತ, ಸಾಹಿತಿ, ಕಬ್ಬಿನಾಲೆ ವಸಂತ ಭಾರದ್ವಾಜ್ ಅವರನ್ನು ಆಯ್ಕೆ ಮಾಡಲಾಗಿದೆ.ಹಿರಿಯ ವಿದ್ವಾಂಸ ಡಾ.ನಾ.ದಾಮೋದರ ಶೆಟ್ಟಿ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದ್ದು, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯು 10 ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾರ್ಚ್ ಕೊನೆಯಲ್ಲಿ ನಡೆಯಲಿರುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಸ್ಟೇಟ್‌ಬ್ಯಾಂಕ್ ಆಫ್ ಮೈಸೂರಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಸಿಬ್ಬಂದಿ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ ಸ್ವಯಂನಿವೃತ್ತಿ ಪಡೆದು ಭಾಷೆ, ವ್ಯಾಕರಣ, ಛಂದಃಶಾಸ್ತ್ರಗಳಲ್ಲಿ ವಿದ್ವತ್ತನ್ನು ಗಳಿಸಿ, ಗಮಕ ವ್ಯಾಖ್ಯಾನಕಾರರಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ. ಮಹಾಕಾವ್ಯ, ಯಕ್ಷಗಾನ ಪ್ರಸಂಗ ಕರ್ತರಾಗಿ ಮಾಡಿರುವ ಕಥೆ, ಅನುವಾದ, ಸಂಶೋಧನೆ, ವಿಮರ್ಶೆ, ನಿಘಂಟುರಚನೆ, ಗ್ರಂಥಸಂಪಾದನೆ, ಗೀತರೂಪಕ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಧನೆ ಮಾಡಿದ್ದಾರೆ.ಯಕ್ಷಗಾನ ಛಂದಸ್ಸು, ಪಳಂತುಳು ಕಾವ್ಯ, ಶಬ್ದಶಾರದೆಯ ಸೆರಗು, ಯಕ್ಷಗಾನ ಕವಿಚರಿತ್ರೆ, ಪುರಂದರ ಮುಂಡಿಗೆ, ಕನಕ ಮುಂಡಿಗೆ, ಕನಕದಾಸರ ಕಾವ್ಯಭಾಷೆ, ಕುವೆಂಪು ಮತ್ತು ಅಧ್ಯಾತ್ಮ, ತಾವರೆಯ ತೇರು, ಛಂದೋವಸಂತ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.ಇವರ ಕುವೆಂಪು ರಾಮಾಯಣ ಆಧಾರಿತ ‘ಶ್ರೀರಾಮಲೀಲಾದರ್ಶನಂ’ ಯಕ್ಷಗಾನ ಮಹಾಕಾವ್ಯವಾಗಿ ಮನ್ನಣೆ ಗಳಿಸಿದೆ. ‘ಕನಕತರಂಗಿಣಿ’, ‘ಶ್ರೀಪುರಂದರ ಮಹತಿ’, ‘ಶ್ರೀಲಪ್ರಭುಪಾದಚರಿತಾಮೃತಮ್’ ಮಹಾಕಾವ್ಯಗಳು ಆಧುನಿಕಕಾಲದ ಛಂದೋಬದ್ಧ ಮಹಾನ್ ಕೃತಿಗಳಾಗಿವೆ. ಯಕ್ಷಗಾನ ಛಂದಸ್ಸಿನ ಕುರಿತಾದ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.ಅವರು ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಖಿಲ ಕರ್ನಾಟಕ ಗಮಕ ಕಲಾಸಮ್ಮೇಳನದ ಅಧ್ಯಕ್ಷತೆ ಹಾಗೂ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರಿಗೆ ಒಲಿದು ಬಂದಿತ್ತು. ಇವರ ಸಾಧನೆಗೆ ಗೌರವವೆಂಬಂತೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕನಕಗೌರವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರಾವಳಿ ರತ್ನ, ಗಮಕ ರತ್ನಾಕರ ಪ್ರಶಸ್ತಿ, ವಿದ್ಯಾಭೂಷಣ ಪ್ರಶಸ್ತಿ, ಅಕಳಂಕ ಪ್ರಶಸ್ತಿ, ಯಕ್ಷಮಂಗಳಾ ಕೃತಿಪ್ರಶಸ್ತಿ ಮೊದಲಾದ ಹತ್ತುಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ