ಆರೋಪಿ ಬಂಧನಕ್ಕೆ ನೆರವಾಯ್ತು ಎಎಸ್‌ಐ ಕರ್ತವ್ಯ ಪ್ರಜ್ಞೆ!

KannadaprabhaNewsNetwork | Published : Jun 23, 2024 2:09 AM

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ಮದ್ಯವ್ಯಸನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕ್ಷುಲ್ಲಕ ಕಾರಣಕ್ಕೆ ಮದ್ಯವ್ಯಸನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಾಹಿತಿ ನೀಡಿದ ಅವರು, ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ವಿನಾಯಕ ರಾಜು ಬೆನಗೂರೆ (27) ಬಂಧಿತ ಆರೋಪಿ. ಜೂ.17ರ ಬೆಳಗಿನ ಜಾವ ಯಕ್ಸಂಬಾದ ನಿವಾಸಿ ಮಹಾಂತೇಶ ಕುರ್ಣೆ (48) ಎಂಬಾತನ ತಲೆಯ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಮಾತ್ರ ಯಾವುದೇ ರೀತಿಯ ಸುಳಿವು ಸಿಕ್ಕಿರಲಿಲ್ಲ. ಇದರಿಂದಾಗಿ ಪೊಲೀಸರು ಮಾತ್ರ ಹಂತಕ ಯಾವುದೇ ರೀತಿಯ ಸುಳಿವು ನೀಡದ್ದರಿಂದ, ಆರೋಪಿ ಯಾರೆಂದು ಕಂಡು ಹಿಡಿಯುವಲ್ಲಿ ಹೈರಾಣಾಗಿದ್ದರು.ಕೊಲೆಗೆ ಏನು ಕಾರಣವಾಗಿತ್ತು?:

ಹತ್ಯೆಗೀಡಾದ ಮಹಾಂತೇಶ ಕುರ್ಣೆ ಹಾಗೂ ಕೊಲೆ ಆರೋಪಿ ವಿನಾಯಕ ಬೆನಗೂರೆ ಯಕ್ಸಂಬಾ ಗ್ರಾಮದವರೆ. ಮಹಾಂತೇಶ ಕುರ್ಣೆ ಮದ್ಯವ್ಯಸನಿಯಾಗಿದ್ದ. ಕಂಠಪೂರ್ತಿ ಕುಡಿದು ರಸ್ತೆ ಮೇಲೆ ಮಲಗಿದ್ದ. ಈ ಸಮಯಕ್ಕೆ ಆರೋಪಿ ವಿನಾಯಕ ಮೂತ್ರ ವಿಸರ್ಜನೆಗೆಂದು ಹೋಗುತ್ತಿದ್ದಾಗ ರಸ್ತೆ ಮೇಲೆ ಮಲಗಿದ್ದ ಮಹಾಂತೇಶನಿಗೆ ಕಾಲು ತಾಕಿದೆ. ಇದರಿಂದ ಮಹಾಂತೇಶ ಹಾಗೂ ವಿನಾಯಕನ ನಡುವೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗುತ್ತಿದ್ದಂತೆ ಮಹಾಂತೇಶ ಸಣ್ಣಗಾತ್ರದ ಕಲ್ಲಿನಿಂದ ವಿನಾಯಕನತ್ತ ತೂರಿದ್ದಾನೆ. ಇದರಿಂದ ಸಹನೆ ಕಳೆದುಕೊಂಡ ವಿನಾಯಕ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ದೊಡ್ಡ ಕಲ್ಲಿನಿಂದ ಮಹಾಂತೇಶನ ಮೇಲೆ ಎತ್ತಿಹಾಕಿ ಹತ್ಯೆ ಮಾಡಿದ್ದಾನೆ ಎಂದರು.ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸದಲಗಾ ಠಾಣೆ ಪೊಲೀಸರು ಘಟನಾಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಈ ಪ್ರಕರಣ ಬೇಧಿಸಲು ಮೂರು ತನಿಖಾ ತಂಡವನ್ನೂ ರಚನೆ ಮಾಡಲಾಗಿತ್ತು. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಒಂದೇ ಒಂದು ಸುಳಿವು ಸಿಕ್ಕಿರಲಿಲ್ಲ.ಆರೋಪಿ ಸಿಕ್ಕಿದಾದರೂ ಹೇಗೆ?:

ಕಲ್ಲು ಎತ್ಹಾಕಿ ಮಹಾಂತೇಶ ಹತ್ಯೆ ಮಾಡಿದ ಆರೋಪಿ ಯಾರೆಂದು ಪತ್ತೆ ಮಾಡುವಲ್ಲಿ ಪೊಲೀಸರು ಭಾರಿ ಶೋಧ ನಡೆಸಿದ್ದರು. ಆದರೆ, ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆರೋಪಿ ಸಿಕ್ಕಿದ್ದು ಕೂಡ ವಿಚಿತ್ರವಾಗಿತ್ತು.ಎಎಸ್‌ಐ ರಮೇಶ ತಳವಾರ ಅವರು ಜಾತ್ರೆ ನಿಮಿತ್ತ ಯಕ್ಸಂಬಾದಲ್ಲೇ ರಾತ್ರಿ ಕರ್ತವ್ಯದಲ್ಲಿದ್ದರು. ಬೀರೇಶ್ವರ ದೇವಸ್ಥಾನದಲ್ಲಿ ಪ್ರಾಂಗಣದಲ್ಲಿ ರಾತ್ರಿ ಮಲಗಿದ್ದ ಮೂವರು ವ್ಯಕ್ತಿಗಳನ್ನು ಒಳಗೆ ಹೋಗಿ ಮಲಗುವಂತೆ ತಿಳಿಸಿದ್ದರು. ಈ ವೇಳೆ ಒಬ್ಬನ ಮುಖ ಪರಿಚಯ ತಳವಾರಗೆ ಗೊತ್ತಿತ್ತು. ಕರ್ತವ್ಯ ಮುಗಿಸಿಕೊಂಡು ಎಎಸ್‌ಐ ತಳವಾರ ವಾಪಸಾಗಿದ್ದರು. ಆದರೆ ಈ ಹತ್ಯೆ ಘಟನೆ ಕುರಿತು ಇವರಿಗೆ ಯಾವುದೇ ಮಾಹಿತಿ ಇರಲಿಲ್ಲ. ನಂತರ ಹತ್ಯೆ ವಿಚಾರ ಅರಿತ ಎಎಸ್‌ಐ ತಳವಾರ ಅವರು, ತಕ್ಷಣ ರಾತ್ರಿ ಕರ್ತವ್ಯದ ಸಮಯದಲ್ಲಿ ಮಾತನಾಡಿಸಿಕೊಂಡು ಬಂದಿದ್ದ ವ್ಯಕ್ತಿಯನ್ನು ವಿಚಾರಿಸಿದ್ದಾರೆ. ಬಳಿಕ ಒಂದೊಂದಾಗಿ ಸುಳಿವು ಸಿಕ್ಕಿದೆ. ನಂತರ ಆತನನ್ನು ಸರಿಯಾಗಿ ವಿಚಾರಣೆ ನಡೆಸಿದ್ದರಿಂದ ಹತ್ಯೆ ರಹಸ್ಯ ಬಯಲಾಗಿದೆ.ಕೊಲೆ ಪ್ರಕರಣ ಬೇಧಿಸಿದ ಸದಲಗಾ ಠಾಣೆಯ ಪೊಲೀಸರ ಹಾಗೂ ಎಎಸ್‌ಐ ರಮೇಶ ತಳವಾರ ಕಾರ್ಯಕ್ಕೆ ಉತ್ತರ ವಲಯ ಐಜಿಪಿ ವಿಕಾಶಕುಮಾರ ವಿಕಾಸ್ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ, ಹೆಚ್ಚುವರಿ ಎಸ್ಪಿ ಶೃತಿ ಅವರು ಶ್ಲಾಘನಿಸಿದ್ದಾರೆ. ಅಲ್ಲದೇ ಎಎಸ್‌ಐ ರಮೇಳ ತಳವಾರ ಅವರಿಗೆ ಐಜಿಪಿ ವಿಕಾಶಕುಮಾರ ಅವರು ₹ 15 ಸಾವಿರ ನಗದು ಬಹುಮಾನ ನೀಡಿದ್ದಾರೆ. ಈ ಕುರಿತು ಸದಲಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article